janadhvani

Kannada Online News Paper

ಪ್ರಚಾರಕ್ಕಾಗಿ ಧಾರ್ಮಿಕ ಕೇಂದ್ರಗಳನ್ನು ಬಳಕೆ ಮಾಡಿದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರಗಳನ್ನು ಪ್ರಚಾರಕ್ಕಾಗಿ ಬಳಕೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಬಹುದು. ಆದರೆ, ಪ್ರಚಾರ ಮಾಡುವಂತಿಲ್ಲ. ಅಲ್ಲಿ ಸೇರಿರುವ ಜನರ ಬಳಿ ತಮಗೆ ಮತ ನೀಡುವಂತೆ ಮನವಿ ಮಾಡುವಂತಿಲ್ಲ ಎಂದರು.

ಮತಗಟ್ಟೆಯಲ್ಲಿ ಯಾವುದೇ ರೀತಿಯ ಗಲಾಟೆ ಮಾಡುವಂತಿಲ್ಲ. ಯಾವುದೇ ತೊಂದರೆ ಎದುರಾದಲ್ಲಿ ಕೂಡಲೇ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು. 10–15 ನಿಮಿಷದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿದ್ದಾರೆ. ಅದನ್ನು ಬಿಟ್ಟು ಮತಗಟ್ಟೆ ಒಳಗೆ ಅಥವಾ ಹೊರಗೆ ಗಲಾಟೆ ಮಾಡಿದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮತದಾನ ಮಾಡುವವರ ಕೈಗೆ ಶಾಹಿ ಹಾಕಲಾಗುತ್ತದೆ. ಜತೆಗೆ ಮತಕ್ಷೇತ್ರದಲ್ಲಿ ಗೈರಾಗಿರುವ, ಸ್ಥಳಾಂತರ ಆಗಿರುವ ಹಾಗೂ ಮೃತಪಟ್ಟಿಯಲ್ಲಿರುವವರ ಪಟ್ಟಿಯನ್ನು ಎಲ್ಲ ಬೂತ್‌ಗಳಿಗೆ ಒದಗಿಸಲಾಗುತ್ತದೆ. ಮತಗಟ್ಟೆಗಳಲ್ಲೂ 2–3 ಬಾರಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.

ಅಲ್ಲದೇ ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಏಜೆಂಟರು ಇರಲಿದ್ದು, ಬೇರೆ ಜನರು ಬಂದು ಮತದಾನ ಮಾಡುವುದಕ್ಕೆ ಬಿಡುವುದಿಲ್ಲ. ಹೀಗಾಗಿ ಎರಡು ಕಡೆ ಮತದಾನ ಮಾಡುವುದು ಬಹುತೇಕ ಸಾಧ್ಯವಿಲ್ಲ. ಆದರೂ, ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದೆ. ನಿರ್ದಿಷ್ಟ ದೂರು ಬಂದಲ್ಲಿ ತನಿಖೆ ಮಾಡಲಾಗುವುದು ಎಂದು ಹೇಳಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗಿರುವ ವಾಹನ ಚಾಲಕರಿಗೆ ಇಡಿಸಿ (ಇಲೆಕ್ಷನ್‌ ಡ್ಯೂಟಿ ಸರ್ಟಿಫಿಕೇಟ್‌) ನೀಡಲಾಗುತ್ತಿದ್ದು, ಅದನ್ನು ತೋರಿಸಿ, ಕರ್ತವ್ಯದಲ್ಲಿ ಇರುವ ಬೂತ್‌ನಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಚುನಾವಣೆ ಕರ್ತವ್ಯದಲ್ಲಿ ಇರುವ ಪೊಲೀಸರು, ಸೇನೆಯಲ್ಲಿ ಇರುವವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.

error: Content is protected !! Not allowed copy content from janadhvani.com