janadhvani

Kannada Online News Paper

ಜಾತ್ಯತೀತ ಪರಂಪರೆಯನ್ನು ಭದ್ರಗೊಳಿಸುವವರ ಕೈಗೆ ದೇಶದ ಚುಕ್ಕಾಣಿ ನೀಡಿ- ಮುಸ್ಲಿಂ‌ ಜಮಾಅತ್

ಬೆಂಗಳೂರು, ಮಾ.25: ಜಾತ್ಯತೀತ ಭಾರತದ ಭವ್ಯ ಪರಂಪರೆಯನ್ನು ಭದ್ರಗೊಳಿಸುವ, ಸಮಾಜದ ಶೋಷಿತ ಮತ್ತು ದಮನಿತ ವರ್ಗಗಳ ಹಿತವನ್ನು ಕಾಪಾಡುವ ನಾಯಕರ ಕೈಗೆ ದೇಶದ ಚುಕ್ಕಾಣಿ ನೀಡುವಂತೆ ಕರ್ನಾಟಕ ಮುಸ್ಲಿಂ‌ ಜಮಾಅತ್ ಮತದಾರರಿಗೆ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ‌ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್‌.ಕೆ.ಎಂ.ಶಾಫಿ ಸ‌ಅದಿ ಬೆಂಗಳೂರು, ಈ ಲೋಕಸಭಾ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರದ ಸಾಂವಿಧಾನಿಕ ಮೌಲ್ಯವನ್ನು ಕಾಪಾಡಿ ದಮನಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬಲ್ಲ ಸುಭದ್ರ ಸರಕಾರದ ರಚನೆಯ ಪ್ರಕ್ರಿಯೆಯಲ್ಲಿ ನಾಗರಿಕರು ರಚನಾತ್ಮಕವಾಗಿ ಪಾಲ್ಗೊಳ್ಳಬೇಕು. ಮತದಾನದ ಶೇಕಡಾವಾರು ಪ್ರಮಾಣವು ಈ ಹಿಂದೆಂದಿಗಿಂತಲೂ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು.

ರಾಜ್ಯದ ಜನಸಂಖ್ಯಯ 15 ಶೇ.ದಷ್ಟಿರುವ ಮುಸ್ಲಿಂ‌ ಸಮುದಾಯವನ್ನು ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದು, ಕಡೇ ಪಕ್ಷ ಮುಸ್ಲಿಂ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸದೇ ಹಿಂದೇಟು ಹಾಕಿರುವುದು ದುರದೃಷ್ಟಕರ. ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟೇ ಸಬಲೀಕರಣಗೊಳ್ಳಬೇಕಾದ ಸಮುದಾಯವೊಂದನ್ನು ರಾಜಕೀಯ ಪಕ್ಷಗಳು ಈ ರೀತಿ ಕಡೆಗಣಿಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ರಾಜಕೀಯ ಧೋರಣೆಯನ್ನು ಸಮುದಾಯದೆಡೆಯಲ್ಲಿ ಬೆಳೆಸುವ ಕಾರ್ಯತಂತ್ರದೆಡೆಗೆ ಸಂಘಟನೆ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳಲ್ಲಿರುವ ಮುಸ್ಲಿಂ ಕಾರ್ಯಕರ್ತರನ್ನು ಚುನಾವಣಾ ಸಂದರ್ಭಕ್ಕೆ ಮಾತ್ರ ಬಳಸಿಕೊಳ್ಳುತ್ತಿರುವ ಪಕ್ಷಗಳ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುವುದು. ಮುಸ್ಲಿಂ ಮತಗಳ ಹಂಚಿಹೋಗದಂತೆ ಸಮುದಾಯದ ವಿವಿಧ ಸಂಘಟನೆಗಳು ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾ‌ಅತ್ ರಾಜ್ಯ ಉಪಾಧ್ಯಕ್ಷ ಮಹ್ಮೂದ್ ಮುಸ್ಲಿಯಾರ್, ಸಲಹೆಗಾರ ಶೈಖುನಾ ಅಬ್ಬಾಸ್ ಉಸ್ತಾದ್, ಕೊಡಗು ಜಿಲ್ಲಾ ಸಂಚಾಲಕ ಹಫೀಳ್ ‌ಸ‌ಅದಿ, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಅಬ್ದುಲ್ಲತೀಫ್ ಸುಂಟಿಕೊಪ್ಪ, ಹಂಝ ಕೊಟ್ಟಮುಡಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com