janadhvani

Kannada Online News Paper

ಸೌದಿಯಲ್ಲಿ ಮೃತಪಟ್ಟಿದ್ದ ಕೇರಳದ ರಫೀಕ್‌- ಮನೆಗೆ ತಲುಪಿದ್ದು ಏನು ಗೊತ್ತೇ?

ತಿರುವನಂತಪುರಂ: ಹೃದಯಾಘಾತದಿಂದ ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಭಾರತದ ರಫೀಕ್‌(28) ಅವರ ಮೃತ ದೇಹಕ್ಕಾಗಿ ಸಂಬಂಧಿಕರು ಕಾದಿದ್ದರು. ಊರು ಸೇರಿದ ಶವ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಮನೆಮಂದಿಗೆಲ್ಲ ಆಘಾತ ಕಾದಿತ್ತು. ಆ ಪೆಟ್ಟಿಗೆಯಲ್ಲಿ ಮಹಿಳೆ ಶವವಿತ್ತು.

ಕುಮ್ಮನ್ನೂರ್ ಈಟ್ಟಿಮುಟ್ಟಿಲ್ ರಫೀಕ್(28) ಸೌದಿ ಅರೇಬಿಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಬುಧವಾರ ರಾತ್ರಿ ಹತ್ತು ಗಂಟೆಗೆ ಕಮ್ಮುನ್ನೂರಿನ ಮನೆಗೆ ಸೌದಿಯಿಂದ ವಿಮಾನ ಮೂಲಕ ಮೃತದೇಹ ಬಂದಿತ್ತು. ಮೃತದೇಹದ ಪೆಟ್ಟಿಗೆಯಲ್ಲಿ ಪಾಸ್‍ಪೋರ್ಟ್ ನಂಬರ್, ರಫೀಕ್ ಎಂಬೆಲ್ಲ ವಿವರಗಳನ್ನು ಬರೆದಿರಿಸಲಾಗಿತ್ತು. ಆದರೆ ಪೆಟ್ಟಿಗೆ ನೋಡಿದಾಗ ಅದರೊಳಗಿದ್ದ ಮೃತದೇಹ ಯುವಕನ ಬದಲು ಯುವತಿಯದ್ದಾಗಿತ್ತು.

ಸೌದಿ ಏರ್‍ಲೈನ್ಸ್ ವಿಮಾನದಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ಸಂಬಂಧಿಕರು ಮೃತದೇಹವನ್ನು ಕೊಂಡು ಹೋಗಿದ್ದರು. ಸೌದಿ ಅರೇಬಿಯದಲ್ಲಿಯೇ ಮೃತದೇಹಕ್ಕೆ ಸ್ನಾನ ಮಾಡಿಸಿ ಪ್ಯಾಕ್ ಮಾಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ಗಲ್ಫ್ ನಲ್ಲಿ ರಫೀಕ್ ಜೊತೆಗಿದ್ದವರು ಹೇಳುತ್ತಿದ್ದಾರೆ.

ಮಹಿಳೆಯ ಮೃತದೇಹವನ್ನು ಕೋಟ್ಟಯಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಹಾಗೂ ಮರಳಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

error: Content is protected !! Not allowed copy content from janadhvani.com