ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ ಬಿಜೆಪಿಯ ಹಲವು ಉನ್ನತ ನಾಯಕರಿಗೆ ಸುಮಾರು ₹1800 ಕೋಟಿ ಮೊತ್ತದಷ್ಟು ಹಣ ಪಾವತಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ‘ದಿ ಕ್ಯಾರವಾನ್’ ನಿಯತಕಾಲಿಕೆ ಶುಕ್ರವಾರ ಪ್ರಕಟಿಸಿದೆ.
‘ದಿ ಯೆಡ್ಡಿ ಡೈರೀಸ್’ ಶೀರ್ಷಿಕೆಯ ತನಿಖಾ ವರದಿಯಲ್ಲಿ ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿ ಅವರಿಗೆ ತಲಾ ₹150 ಕೋಟಿ, ರಾಜನಾಥ್ ಸಿಂಗ್ ಅವರಿಗೆ ₹100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ತಲಾ ₹50 ಕೋಟಿ ಹಣವನ್ನು ಯಡಿಯೂರಪ್ಪ ಪಾವತಿಸಿದ್ದಾರೆ ಎಂದು ಯಡಿಯೂರಪ್ಪ ಅವರೇ ಸ್ವತಃ ಬರೆದಿದ್ದಾರೆ ಎನ್ನಲಾದ ಡೈರಿಯ ಹಾಳೆಗಳನ್ನು ಉಲ್ಲೇಖಿಸಿ ನಿಯತಕಾಲಿಕೆಯು ವರದಿ ಮಾಡಿದೆ.

ಆದಾಯ ತೆರಿಗೆ ಇಲಾಖೆಯ ಬಳಿ 2017ರಿಂದ ಇರುವ ಈ ಡೈರಿಯಲ್ಲಿ ‘ನಿತಿನ್ ಗಡ್ಕರಿ ಮಗನ ಮದುವೆಗೆ ₹10 ಕೋಟಿ, ನ್ಯಾಯಾಧೀಶರಿಗೆ ₹250 ಕೋಟಿ ಮತ್ತು ವಕೀಲರಿಗೆ (ಶುಲ್ಕ) ₹50 ಕೋಟಿ ಪಾವತಿಸಲಾಗಿದೆ’ ಎನ್ನುವ ಮಾಹಿತಿಯೂ ಇದೆ ಎಂದು ‘ಕ್ಯಾರವಾನ್’ ಹೇಳಿದೆ.
ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆಸಿದ
‘ನನ್ನ ಹೆಂಡತಿ ಮೈತ್ರಾದೇವಿ ನಿಧನದ ನಂತರ ಒಂಟಿತನ ತೀವ್ರವಾಗಿ ಬಾಧಿಸುತ್ತಿತ್ತು. ಅದಕ್ಕಾಗಿಯೇ ಶೋಭಾ ಕರಂದ್ಲಾಜೆಯನ್ನು ಕೇರಳದ ಚೊಟ್ಟನಿಕ್ಕರಾದಲ್ಲಿರುವ ಭಗವತಿ ದೇಗುಲದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದೆ. ಯಡಿಯೂರು ಸಿದ್ದಲಿಂಗನ ಹೆಸರಿನಲ್ಲಿ ಆಕೆಯನ್ನು ನನ್ನ ಕಾಯಾ, ವಾಚಾ, ಮನಸಾ ಪತ್ನಿ ಎಂದು ಒಪ್ಪಿಕೊಂಡೆ’.
-ಯಡಿಯೂರಪ್ಪ ಅವರು ಬರೆದಿದ್ದಾರೆ ಎನ್ನಲಾದ ಡೈರಿಯಲ್ಲಿ ಈ ಮಾಹಿತಿಯೂ ಇದೆ ಎಂದು ‘ದಿ ಕ್ಯಾರವಾನ್’ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ, ‘ಯಾರೋ ಹುಚ್ಚರು ಆ ಡೈರಿ ಬರೆದಿರಬೇಕು ಎಂದು ಶೋಭಾ ಫೋನ್ ಕುಕ್ಕಿದರು. ಮತ್ತೆಮತ್ತೆ ಫೋನ್ ಮಾಡಿದರೂ ಶೋಭಾ ನಮ್ಮ ಕರೆ ಸ್ವೀಕರಿಸಲಿಲ್ಲ’ ಎಂದು ಕ್ಯಾರಾವಾನ್ ವರದಿಗಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
‘2016ರಲ್ಲಿ ಯಡಿಯೂರಪ್ಪ–ಶೋಭಾ ಮದುವೆಯಾಗಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಯಡಿಯೂರಪ್ಪ ಅಥವಾ ಶೋಭಾ ಈ ವರದಿಗಳನ್ನು ನಿರಾಕರಿಸಿರಲಿಲ್ಲ. ಆದರೆ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು’ ಎಂದು ಕ್ಯಾರಾವಾನ್ ವರದಿ ಹೇಳಿದೆ.