ಉದ್ಯೋಗ ಸೃಷ್ಟಿ ಮಾಡದೆ ಕೇಂದ್ರಸರ್ಕಾರ ಮತ್ತಷ್ಟು ತಪ್ಪು ಮಾಡುತ್ತಿದೆ- ಚಿದಂಬರಂ

ನವದೆಹಲಿ: ಉದ್ಯೋಗ ಸೃಷ್ಟಿ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ನಿರುದ್ಯೋಗ ಪ್ರಮಾಣ ಪ್ರಮುಖ ವಿಷಯವಾಗಿರಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉದ್ಯೋಗ ಸೃಷ್ಟಿ ಮಾಡದೆ ತಪ್ಪೆಸಗಿರುವ ಕೇಂದ್ರದ ಎನ್‌ಡಿಎ ಸರ್ಕಾರ ಆ ಕುರಿತು ಸುಳ್ಳು ಹೇಳುವ ಮೂಲಕ ಮತ್ತಷ್ಟು ತಪ್ಪು ಮಾಡುತ್ತಿದೆ ಎಂದೂ ಚಿದಂಬರಂ ಟೀಕಿಸಿದ್ದಾರೆ.

ನಿರುದ್ಯೋಗ ಪ್ರಮಾಣಕ್ಕೆ ಸಂಬಂಧಿಸಿ ಮೊದಲಿನಿಂದಲೂ ಪ್ರಧಾನಿ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಲೇ ಬಂದಿದೆ. ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ, ಅಂದರೆ ಶೇ 6.1ರಷ್ಟಿದೆ ಎಂದು ಈಚೆಗೆ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಸಮೀಕ್ಷಾ ವರದಿ ಹೇಳಿತ್ತು. ಇದರ ನಂತರ ಕಾಂಗ್ರೆಸ್ ನಾಯಕರ ವಾಗ್ದಾಳಿ ತೀವ್ರಗೊಂಡಿದೆ.

ಕೃಷಿ, ವಿದೇಶಿ ಹೂಡಿಕೆ, ರಫ್ತು, ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ ಕುಸಿತ, ವಿತ್ತೀಯ ಕೊರತೆ ಹೆಚ್ಚುತ್ತಿರುವುದು ಮತ್ತು ಆರ್ಥಿಕ ಬೆಳವಣಿಗೆ ಕುಂಠಿತವಾಗುತ್ತಿರುವುದರ ಬಗ್ಗೆ ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.

ರಫ್ತಿಗೆ ಉತ್ತೇಜನ ನೀಡಲು ಸಮಗ್ರ ನೀತಿಯೊಂದನ್ನು ರೂಪಿಸಬೇಕು ಎಂದೂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!