janadhvani

Kannada Online News Paper

ಪತ್ನಿಯನ್ನು ತ್ಯಜಿಸಿದ ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ರದ್ದು

ಹೊಸದಿಲ್ಲಿ, ಮಾ.4: ಅನಿವಾಸಿ ಭಾರತೀಯ(NRI) ರಲ್ಲಿ ಪತ್ನಿಯನ್ನು ತ್ಯಜಿಸಿದ 45 ಮಂದಿಯ ಪಾಸ್‌ಪೋರ್ಟನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ಅಧ್ಯಕ್ಷತೆಯ ಸಂಘಟಿತ ನೋಡಲ್ ಸಂಸ್ಥೆಯು ಮದುವೆಯಾಗಿ ಪತ್ನಿಯರನ್ನು ತ್ಯಜಿಸುವ ಎನ್‌ಆರ್‌ಐಗಳ ಕುರಿತು ಗಮನ ನೀಡಲಿದ್ದು, ಪತ್ನಿಯನ್ನು ತ್ಯಜಿಸಿ ತಲೆಮರೆಸಿಕೊಂಡಿರುವ ಎನ್‌ಆರ್‌ಐಗಳ ಬಗ್ಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ 45 ಎನ್‌ಆರ್‌ಐಗಳ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

ಎನ್‌ಆರ್‌ಐ ಪತಿಯಿಂದ ಪರಿತ್ಯಕ್ತರಾಗಿರುವ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ರಾಜ್ಯಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿತ್ತು. ಆದರೆ ಇದಕ್ಕೆ ಅಂಗೀಕಾರ ದೊರಕದಿರುವುದರಿಂದ ನಿರಾಶೆಯಾಗಿದೆ ಎಂದರು.

ಎನ್‌ಆರ್‌ಐಗಳ ವಿವಾಹವನ್ನು ನೋಂದಾಯಿಸುವುದು, 1976ರ ಪಾಸ್‌ಪೋರ್ಟ್ ಕಾಯ್ದೆಗೆ ತಿದ್ದುಪಡಿ, 1973ರ ಕ್ರಿಮಿನಲ್ ಪ್ರಕ್ರಿಯೆ ಕಾಯ್ದೆಗೆ ತಿದ್ದುಪಡಿ ಬಯಸುವ ಮಸೂದೆಯನ್ನು ಸರಕಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯು ವಿದೇಶ ವ್ಯವಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ ಇಲಾಖೆ ಹಾಗೂ ಕಾನೂನು ಮತ್ತು ನ್ಯಾಯ ಇಲಾಖೆಯ ಜಂಟಿ ಉಪಕ್ರಮವಾಗಿದೆ.

error: Content is protected !! Not allowed copy content from janadhvani.com