janadhvani

Kannada Online News Paper

ರಾಷ್ಟ್ರ ರಾಜಧಾನಿಯಲ್ಲಿ ರಾರಾಜಿಸಲಿದೆ ಎಸ್ಸೆಸ್ಸೆಫ್ ತ್ರಿವರ್ಣ ಧ್ವಜ

✍ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ*

ಭಾರತೀಯ ಮುಸ್ಲಿಮರ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್-ಎಸ್ಎಸ್ಎಫ್ ಇದರ ರಾಷ್ಟ್ರೀಯ ಸಮಿತಿಯು ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರದ ರಾಜಧಾನಿಯಾದ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಫೆಬ್ರವರಿ 24ಕ್ಕೆ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಂಡಿದೆ.

ಅದರ ಭಾಗವಾಗಿ ಫೆಬ್ರವರಿ 23ರಂದು ದೇಶದ ವಿವಿಧ ಕಡೆಗಳಿಂದ ಆಗಮಿಸುವ ಜಿಲ್ಲೆ ಹಾಗೂ ರಾಜ್ಯ ಮಟ್ಟದ ನಾಯಕರಿಗೆ “ಪ್ರತಿನಿಧಿ ಸಮಾವೇಶ”ವನ್ನು ಆಯೋಜಿಸಿದೆ. ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿರುವ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಗೆ ಭವ್ಯ ಸ್ವಾಗತ ನೀಡಿ ರಾಷ್ಟ್ರೀಯ ಸಮಾವೇಶವನ್ನು ಐತಿಹಾಸಿಕ ವಿಜಯಗೊಳಿಸಲು ಉತ್ತರ ಭಾರತದ ಎಸ್ಸೆಸ್ಸೆಫ್ ನ ಕರ್ಮವೀರ ಪಡೆಯು ಕಾತರದಿಂದ ಕಾಯುತ್ತಿದೆ.

ಸಮಾವೇಶಕ್ಕಾಗಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ವೇದಿಕೆಯು ಸಜ್ಜಾಗುತ್ತಿದೆ.
ಇದರ ಪ್ರಚಾರಾರ್ಥವಾಗಿ ಜ 11ರಂದು ಶ್ರೀನಗರದಐತಿಹಾಸಿಕ ಹಝ್ರತ್ ಬಾಲ್ ಮಸೀದಿಯಿಂದ ಆರಂಭಿಸಲಾದ ಹಿಂದ್ ಸಫರ್ ಯಾತ್ರೆಯು ಭಾರತದ 22 ರಾಜ್ಯಗಳ ಮೂಲಕ 39 ಪ್ರದೇಶಗಳಲ್ಲಿ ಸಮಾವೇಶಗಳನ್ನು ನಡೆಸಿ ಫೆ.7ರಂದು ಕೇರಳದ ಕಲ್ಲಿಕೋಟೆಯ ಕಡಲ ಕಿನಾರೆಯಲ್ಲಿ ಸಮಾರೋಪಗೊಂಡಿದೆ.

ಅದಲ್ಲದೆ ಸುಲ್ತಾನುಲ್ ಹಿಂದ್ ಖ್ವಾಜಾ ಗರೀಬ್ ನವಾಝ್ ಅಜ್ಮೀರ್ ದರ್ಗಾ ಸೇರಿದಂತೆ ದೇಶಾದ್ಯಂತ 313 ದರ್ಗಾಗಳಲ್ಲಿ “ದರ್ಬಾರೇ ಔಲಿಯಾ” ಝಿಯಾರತ್ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ವಿಶ್ವವಿಖ್ಯಾತ ವಿದ್ವಾಂಸ ಸಭೆ “ಸಮಸ್ತ” ದ ಮುಂದಾಲೋಚನೆಯ ಫಲವಾಗಿ ಹೊರಹೊಮ್ಮಿದ ಸಂಘಟನೆಯಾದ ಎಸ್ಸೆಸ್ಸೆಫ್ ಕೇರಳದ ಮಲಪ್ಪುರಂ ಜಿಲ್ಲೆಯ ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯಃ ಅರೇಬಿಕ್ ಕಾಲೇಜಿನಲ್ಲಿ 1973 ಎಪ್ರಿಲ್ 29ರಂದು ಶ್ಯೆಖುನಾ ಕಣ್ಣಿಯತ್ ಉಸ್ತಾದರ ನೇತೃತ್ವದಲ್ಲಿ ಆಸ್ತಿತ್ವಕ್ಕೆ ಬಂದಿದ್ದು , ಪ್ರಸ್ತುತ ಭಾರತಾದ್ಯಂತ ಕೋಟ್ಯಾಂತರ ಕಾರ್ಯಕರ್ತರು ಹಾಗೂ ಸಾವಿರಾರು ಶಾಖೆಗಳನ್ನು ಹೊಂದಿರುವ ಇದು, ಯಾವುದೇ ಕ್ರಿಮಿನಲ್ ಚಟುವಟಿಕೆ, ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗದೆ, ತನ್ನ ಕೋಟ್ಯಾಂತರ ಕಾರ್ಯಕರ್ತರನ್ನು ಧರ್ಮ ಜಾಗೃತಿಯೊಂದಿಗೆ ನೈಜ ದೇಶ ಸ್ನೇಹವನ್ನು ಬೋಧಿಸುತ್ತಾ ಕೆಡುಕಿನ ವಿರುದ್ಧ ಹೋರಾಡುತ್ತಾ ಒಳಿತಿನತ್ತ ಆಹ್ವಾನಿಸಿ, ದೇಶದ ಸತ್ಪ್ರಜೆಗಳಾಗಿ ಪರಿವರ್ತಿಸಿದ ಖ್ಯಾತಿಯು ಎಸ್ಸೆಸ್ಸಫ್ ಗಿದೆ.

ಫೆಬ್ರವರಿ 24ರಂದು ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಶೌಕತ್ ಅಲಿ ನಈಮಿ ಬುಖಾರಿ ಕಾಶ್ಮೀರಿ, ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮಾವೇಶವು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಳ್ಳುವಾಗ ಸುನ್ನೀ ಸಂಘ ಕುಟುಂಬದ ಎಲ್ಲಾ ನಾಯಕರು ಕಾರ್ಯಕರ್ತರು ಐತಿಹಾಸಿಕ ಅವಿಸ್ಮರಣೀಯ ಸಮಾರಂಭದಲ್ಲಿ ಭಾಗವಹಿಸಿ, ಸಹಕರಿಸಿ,ವಿಜಯಗೊಳಿಸಿ.

error: Content is protected !! Not allowed copy content from janadhvani.com