janadhvani

Kannada Online News Paper

ಸೌದಿಯಲ್ಲಿ ಮೃತಪಟ್ಟ ಉ.ಪ್ರದೇಶದ ವ್ಯಕ್ತಿ: 2 ತಿಂಗಳ ಬಳಿಕ ದಫನ- ನೆರವಾದ ಕೆ.ಸಿ.ಎಫ್

ಜಿದ್ದಾ : ಹೃದಯಾಘಾತದಿಂದ ಮೃತಪಟ್ಟ ಭಾರತೀಯರೊಬ್ಬರ ಅಂತಿಮ ಸಂಸ್ಕಾರವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಜಿದ್ದಾದಲ್ಲಿ ನೆರವೇರಿಸಲಾಯಿತು.ಉತ್ತರ ಪ್ರದೇಶದ, ಆಝಂಗಡ್ ಜಿಲ್ಲೆಯ ಸೈಯದ್ ಶಹಜಹಾನ್ ಖಾನ್ ಎಂಬವರು ಡಿಸೆಂಬರ್ 06 ರಂದು ಜಿದ್ದಾದ ಬಲದ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರು ತಮ್ಮ ಕೊಠಡಿಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಶಹಜಹಾನ್ ಖಾನ್ ಚಲನವಲನವಿಲ್ಲದ ಬಗ್ಗೆ ಸಂಶಯಗೊಂಡ ನೆರೆಹೊರೆಯವರು ಬಾಗಿಲು ಮುರಿದು ನೋಡಿದಾಗ, ಅವರು ಇಹಲೋಕ ತ್ಯಜಿಸಿ ನಾಲ್ಕು ದಿನಗಳಾಗಿತ್ತು. ಊರಿನ ಸರಿಯಾದ ವಿಳಾಸ ಪಾಸ್ಪೋರ್ಟಿನಲ್ಲಿ ಇಲ್ಲವಾದ್ದರಿಂದ ಹಾಗೂ ಎನ್,ಓ,ಸಿ ಸರಿಯಾಗದಿರುವುದರಿಂದ ಮೃತದೇಹವನ್ನು ಎರಡುವರೆ ತಿಂಗಳವರೆಗೆ ಶವಾಗಾರದಲ್ಲಿಡಬೇಕಾಯಿತು.

ಊರಿನಲ್ಲಿ ವಿಷಯ ತಿಳಿದ ಮೃತರ ಪುತ್ರ ಗುಡ್ಡೂ ಖಾನ್ ಉಮ್ರ ವಿಸಾದಲ್ಲಿ ಜಿದ್ದಾ ತಲುಪಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತರರಾದ ಮುಹಮ್ಮದ್ ಜಾವಿದ್ (ಮುಂಬೈ) ಹಾಗೂ ಮುಹಮ್ಮದ್ ಜಮೀಲ್(ಬಿಜಾಪುರ) ಅವರು ಮದೀನಾ ಮುನವ್ವರ ಝೋನ್ ಕೆ.ಸಿ.ಎಫ್ ನೇತಾರರಾದ ರಝಾಕ್ ಉಳ್ಳಾಲ್ ಅವರನ್ನು ಸಂಪರ್ಕಿಸಿದರು.
ರಝಾಖ್ ಅವರ ಪರಿಶ್ರಮದಿಂದ ಫೆ.19 ಮಂಗಳವಾರ ದಂದು ಜಿದ್ದಾದ ಹಂದಾನಿಯ ಅಲ್-ಸ್ವಾಲಿಹ ಖಬರಿಸ್ತಾನದಲ್ಲಿ ಮೃತದೇಹ ದಫನ್ ಮಾಡಲಾಯಿತು.

ದಫನ್ ಕಾರ್ಯದಲ್ಲಿ ಕೆ.ಸಿ.ಎಫ್ ಜಿದ್ದಾ ಝೋನ್ ಕಾರ್ಯದರ್ಶಿಗಳಾದ ಇಬ್ರಾಹಿಂ ಕಿನ್ಯಾ ಹಾಗೂ ಸಾಂತ್ವನ ವಿಭಾಗದ ಚೇರ್ಮನ್ ಸಿದ್ದೀಕ್ ಬಾಳೆಹೊನ್ನೂರು ಅವರು ಭಾಗವಹಿಸಿದ್ದರು.

ಭಾರತದಿಂದ ಹಜ್ಜ್ ಹಾಗೂ ಉಮ್ರಾ ಯಾತ್ರೆಗೆ ಆಗಮಿಸಿದ ಹಜ್ಜಾಜಿಗಳು, ಹಾಗೂ ಇಲ್ಲಿ ಕೆಲಸಕ್ಕೆ ಆಗಮಿಸುವ ಪ್ರವಾಸಿಗರು ಸೌದಿ ಅರೇಬಿಯಾದ ಯಾವುದೇ ಮೂಲೆಯಲ್ಲಿ ಮೃತಪಟ್ಟರೆ ಅವರ ದಫನ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರ, ಸೌದಿ ಪೊಲೀಸ್ ದೃಢೀಕರಣ ಪತ್ರ , ಭಾರತೀಯ ರಾಯಭಾರಿ ಕಚೇರಿ ಸಂಬಂಧಿಸಿದ ಪತ್ರ ಹಾಗೂ ಎನ್.ಒ.ಸಿ ಯನ್ನು ಮಾಡಲು ಕರ್ನಾಟಕ ಕಲ್ಚರಲ್ ಫೌಂಡೇಶನ್‌ ಸಾಂತ್ವನ ವಿಭಾಗವು ಸದಾ ಸನ್ನದ್ಧವಾಗಿದೆ ಎಂದು ಕೆಸಿಎಫ್ ಮದೀನಾ ಝೋನ್ ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಹಕೀಂ ಬೋಳಾರ್

error: Content is protected !! Not allowed copy content from janadhvani.com