ಅಧಿಕಾರಿಗಳಿಗೆ ಲಂಚ ನೀಡಲು ಕಿಡ್ನಿ ಮಾರಾಟಕ್ಕಿದೆ!

ತಿರುವನಂತಪುರ: ‘ಕಿಡ್ನಿ ಮಾರಾಟಕ್ಕಿದೆ. ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ’

ಈ ರೀತಿಯ ಬೋರ್ಡ್‌ವೊಂದನ್ನು ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ವೆಲ್ಲಾತೋವಾಲ್ ನಿವಾಸಿ ಜೋಸೆಫ್ (72) ತಮ್ಮ ಮನೆಯ ಮುಂದೆ ನೇತುಹಾಕಿದ್ದಾರೆ.

ಕಳೆದ ವರ್ಷ ಕೇರಳ ಜನತೆಯ ನಿದ್ದೆಗಡೆಸಿದ್ದ ಪ್ರವಾಹಕ್ಕೆ ಜೋಸೆಫ್‌ ದಂಪತಿ ವಾಸವಿದ್ದ ಮನೆಯು ಹಾನಿಗೊಳಗಾಗಿದೆ. ಆದರೂ ಅನಿವಾರ್ಯವಾಗಿ ಈ ಕುಟುಂಬ ಇಲ್ಲಿಯೇ ನೆಲೆಸಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಕನಿಷ್ಠ ₹10 ಸಾವಿರ ಕೂಡ ತಲುಪಿಲ್ಲ ಎಂದು ಜೋಸೆಫ್ ಅಳಲು ತೋಡಿಕೊಂಡಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳನ್ನು ಕ್ಷಿಪ್ರಗತಿಯಲ್ಲಿ ರಿಪೇರಿ ಮಾಡುತ್ತಿರುವುದಾಗಿ ಕೇರಳ ಸರ್ಕಾರ ಹೇಳಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ದಂಪತಿಯ ಈ ಆರೋಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

‘ಜೋಸೆಫ್‌ ಅವರ ಮನೆಯ ಪೈಕಿ ಶೇಕಡಾ 29ರಷ್ಟು ಭಾಗ ಹಾನಿಗೆ ಒಳಗಾಗಿತ್ತು. ಈಗಿನ ನಿಯಮದ ಪ್ರಕಾರ ₹60ಸಾವಿರ ನೆರವು ನೀಡಲು ಸಾಧ್ಯವಿದೆ. ಈ ಮೊತ್ತ ಪಡೆಯಲು ಅವರು ಸಿದ್ಧರಿಲ್ಲದೇ, ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ, ಪರಿಶೀಲನೆ ಹಂತದಲ್ಲಿದೆ’ ಎಂದು ವೆಳ್ಳತೂವಲ್‌ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಜೋಸೆಫ್‌ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದು, ಹಾನಿಗೆ ಒಳಗಾದ ಬಾಡಿಗೆದಾರರಿಗೆ ₹10ಸಾವಿರ ಪರಿಹಾರ ನೀಡಲಾಗಿದೆ. ಪ್ರವಾಹದ ವೇಳೆ ಮನೆಯ ಸುತ್ತಲಿದ್ದ ಮಣ್ಣನ್ನು 173 ಮಾನವದಿನಗಳನ್ನು ಬಳಸಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.

ಜೋಸೆಫ್‌ ಅವರು ಕೂಲಿ ಕಾರ್ಮಿಕರಾಗಿದ್ದು, ಪತ್ನಿಯ ನೆರವಿನಿಂದ 9 ಕೋಣೆಯ ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇವರ ಮಕ್ಕಳು ಮದುವೆಯಾಗಿ, ಬೇರೆ ಕಡೆ ನೆಲೆಸಿದ್ದಾರೆ.

ಕೃಪೆ: ಪ್ರಜಾವಾಣಿ

Leave a Reply

Your email address will not be published. Required fields are marked *

error: Content is protected !!