janadhvani

Kannada Online News Paper

DKSC ಮುಡಿಪುವಿನ ಶಿಕ್ಷಣ ಕ್ರಾಂತಿಗೆ ಸಮುದಾಯದ ಸಹಕಾರ ಅಗತ್ಯ- ಝಕರಿಯ್ಯ ಅಲ್ ಮುಝೈನ್

ಡಿಕೆಯಸ್ಸಿ ದಮ್ಮಾಂ ಝೋನ್ ವತಿಯಿಂದ ‘ಫ್ಯಾಮಿಲಿ ಮುಲಾಖಾತ್–2026’ ಯಶಸ್ವಿ

ದಮ್ಮಾಂ, ನವೆಂಬರ್ 14: ಮುಂದಿನ ಪೀಳಿಗೆಯನ್ನು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಮೂಲಕ ಪ್ರಜ್ಞಾವಂತ, ಸುಶಿಕ್ಷಿತ ಹಾಗೂ ಜವಾಬ್ದಾರಿಯುತ ಸಮಾಜವಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ) ತನ್ನ ಮಹತ್ವಾಕಾಂಕ್ಷೆಯ ‘ವಿಷನ್–30’ ಯೋಜನೆಯಡಿ ಮುಡಿಪುವಿನಲ್ಲಿ ಬೃಹತ್ ವಿಶ್ವವಿದ್ಯಾಲಯ ಸ್ಥಾಪಿಸುವ ಗುರಿ ಹೊಂದಿದ್ದು, ಶೈಕ್ಷಣಿಕ ಕ್ರಾಂತಿಯ ಮೂಲಕ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಡಿಕೆಯಸ್ಸಿ ವಿಷನರಿ ಮುಖ್ಯಸ್ಥ ಹಾಗೂ ಅಲ್ ಮುಝೈನ್ ಆಡಳಿತಾಧಿಕಾರಿ ಹಾಜಿ ಝಕರಿಯ್ಯ ಜೋಕಟ್ಟೆ ಹೇಳಿದರು.

ಅವರು ನವೆಂಬರ್ 12ರ ಗುರುವಾರ ದಮ್ಮಾಂನಲ್ಲಿ ಡಿಕೆಯಸ್ಸಿ ದಮ್ಮಾಂ ಝೋನ್ ವತಿಯಿಂದ ಆಯೋಜಿಸಲಾದ ‘ಫ್ಯಾಮಿಲಿ ಮುಲಾಖಾತ್–2026’ ಕುಟುಂಬ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಮೂರು ದಶಕಗಳಿಂದ ಡಿಕೆಯಸ್ಸಿ ಸಮಾಜದ ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಮುಡಿಪುವಿನ 30 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬೃಹತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ದೂರದೃಷ್ಟಿಯ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ಪೀಳಿಗೆಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಿ, ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸುವುದು ಡಿಕೆಯಸ್ಸಿಯ ಪ್ರಮುಖ ಧ್ಯೇಯವಾಗಿದೆ ಎಂದು ಅವರು ವಿವರಿಸಿದರು.

ಡಿಕೆಯಸ್ಸಿ ಸೆಂಟ್ರಲ್ ಆರ್ಗನೈಝರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ದುಆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಫ್ಯಾಮಿಲಿ ಮುಲಾಖಾತ್ ಚೇರ್ಮನ್ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ಅವರು ಮುಖ್ಯ ಅತಿಥಿಗಳು ಹಾಗೂ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್‌ಆನ್ ಪಠಿಸಿ, ಅದರ ಕನ್ನಡ ಅನುವಾದವನ್ನು ಪ್ರಸ್ತುತಪಡಿಸಿದರು.

ಗಣ್ಯರ ಉಪಸ್ಥಿತಿ

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಊದ್ ಅಲ್ ಹರ್ಬಿ, ಈಸಾ ಅಲ್ ಹಮ್ದಾನ್, ಶರೀಫ್ ಅಲ್ ಮುಝೈನ್, ಅಬ್ದುಲ್ ಹಮೀದ್ ಅಸ್ಕಾಫ್, ನಝೀರ್ ಅಲ್ ಫಲಾಹ್, ಮುಬೀನ್ ಟೇಬಲ್ ಫೋರ್, ಇಮ್ರಾನ್ ಬಂದರ್ ಸಾನಿವೇಟ್, ಯೂನುಸ್ ಸ್ಯಾಂಡ್ ಟೆಕ್, ರಝೀಂ ಎಕ್ಸೊಲೆನ್, ಬಶೀರ್ ಅಲ್ ಫಲಕ್, ಅಹ್ಮದ್ ಹುಸೈನ್ ಪಡುಬಿದ್ರಿ, ಇಸ್ಮಾಯೀಲ್ ಝಕರಿಯ್ಯ ಪೂಕಾಕ ಬಾರ್ಕೊ, ಶಬೀರ್ ಎಂಪ್ಲಿಟ್ಯೂಡ್ ಹಾಗೂ ಶರೀಫ್ ಬಜ್ಪೆ ಭಾಗವಹಿಸಿದ್ದರು.

ಡಿಕೆಯಸ್ಸಿ ವಿಷನ್–30 ಚೇರ್ಮನ್ ಹಾತಿಂ ಕೂಳೂರು, ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು, ಅಬ್ದುಲ್ ಅಝೀಝ್ ಆತೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ರಿಯಾದ್‌ನಿಂದ ಆಗಮಿಸಿದ ಅಬ್ದುಲ್ ಅಝೀಝ್ ಬಜ್ಪೆ ಹಾಗೂ ದಮ್ಮಾಂ ಝೋನ್ ಅಧ್ಯಕ್ಷ ಅಶ್ರಫ್ ನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವಿಶೇಷ ವೇದಿಕೆ

ಕುಟುಂಬ ಸಮ್ಮಿಲನದ ಅಂಗವಾಗಿ ಮಕ್ಕಳಿಗಾಗಿ ಖಿರಾಅತ್, ಮದ್ಹ್, ಭಾಷಣ, ಚಿತ್ರಕಲೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕುಟುಂಬಗಳ ನಡುವೆ ಪರಸ್ಪರ ಆತ್ಮೀಯತೆ, ಒಗ್ಗಟ್ಟು ಹಾಗೂ ಸೌಹಾರ್ದವನ್ನು ಬೆಳೆಸುವಲ್ಲಿ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಂಡಿತು.

ಡಿಕೆಯಸ್ಸಿಯ ಭವಿಷ್ಯದ ಯೋಜನೆಗಳ ಸಾಕ್ಷ್ಯಚಿತ್ರ ಪ್ರದರ್ಶನ

ಸಮಾರಂಭದ ವಿಶೇಷ ಆಕರ್ಷಣೆಯಾಗಿ ಡಿಕೆಯಸ್ಸಿಯ ಭವಿಷ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳು ಹಾಗೂ ದೂರದೃಷ್ಟಿಯ ಉದ್ದೇಶಗಳನ್ನು ಸಾಕ್ಷ್ಯಚಿತ್ರದ ಮೂಲಕ ಸಭಿಕರಿಗೆ ಪರಿಚಯಿಸಲಾಯಿತು.

ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ ಮೊಹಿದೀನ್ ನಾಝಿಮ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕರ್ತರ ಸಂಘಟಿತ ಪರಿಶ್ರಮಕ್ಕೆ ಮೆಚ್ಚುಗೆ

ಮಕ್ಕಾ ಹಾಗೂ ರಿಯಾದ್ ವಲಯಗಳೊಂದಿಗೆ ದಮ್ಮಾಂ ವಲಯದ ಹಫರ್ ಅಲ್ ಬಾತಿನ್, ಅಲ್ ಹಸ್ಸಾ, ಜುಬೈಲ್, ದಮ್ಮಾಂ, ತುಖ್ಬಾ, ಅಲ್ ಖೋಬರ್ ಮತ್ತು ಯೂತ್ ವಿಂಗ್ ಜುಬೈಲ್ ಘಟಕಗಳ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.

ವಿವಿಧ ಘಟಕಗಳ ಕಾರ್ಯಕರ್ತರ ಸಂಘಟಿತ ಪ್ರಯತ್ನ, ಸಹಕಾರ ಹಾಗೂ ಸೇವಾ ಮನೋಭಾವದಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಇಖ್ಬಾಲ್ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಅಲೀ ಅಲ್ ಮುಝೈನ್ ವಂದನಾರ್ಪಣೆ ಸಲ್ಲಿಸಿದರು.

ಇದನ್ನೂ ಓದಿರಿ...