janadhvani

Kannada Online News Paper

ನಾಳೆ ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡನೆ- ಸರಕಾರದ ಸಾಲವೆಷ್ಟು ಗೊತ್ತೇ? ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಂತಿಮ ಬಜೆಟ್‌ ಶುಕ್ರವಾರ ಮಂಡನೆಯಾಗಲಿದ್ದು, ಅದಕ್ಕೂ ಮುನ್ನ ಸರ್ಕಾರದ ಸಾಲದ ಹೊರೆಯ ಬಗ್ಗೆ ತಿಳಿಯುವ ಪ್ರಯತ್ನ ಇಲ್ಲಿದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಸಾಲದ ಮೊತ್ತ ₹97 ಲಕ್ಷ ಕೋಟಿ. ಬಿಜೆಪಿ ಸರ್ಕಾರದ ಅಧಿಕಾರ ಅವಧಿ 2014ರ ಜೂನ್‌ನಿಂದ ಪ್ರಾರಂಭವಾಗಿದ್ದು, 2014ರ ಮಾರ್ಚ್‌ ಅಂತ್ಯದ ನಂತರದಲ್ಲಿ ಸಾಲದ ಪ್ರಮಾಣ ಶೇ 59ರಷ್ಟು ಏರಿಕೆಯಾಗಿದೆ.

ಈ ಸಾಲದ ಹೊರೆಯನ್ನು ದೇಶ ಎಲ್ಲ ಪ್ರಜೆಗಳಿಗೂ ಹಂಚುವುದಾಗಿ ಕಲ್ಪಿಸಿಕೊಂಡರೆ, 2017–18ರ ಲೆಕ್ಕಾಚಾರದ ಪ್ರಕಾರ ತಲಾ ₹73,966 ಆಗುತ್ತದೆ. ಅಂದರೆ, ದೇಶದ ಪ್ರತಿ ವ್ಯಕ್ತಿಯ ಮೇಲೆ ₹73 ಸಾವಿರ ಸಾಲವಿದೆ. 2014–15ರ ಲೆಕ್ಕದ ಪ್ರಕಾರ ತಲಾ ಸಾಲ ₹54,229 ಆಗುತ್ತದೆ.

ವಿತ್ತ ಸಚಿವಾಲಯ ಪ್ರತಿ ವರ್ಷ ಬಿಡುಗಡೆ ಮಾಡುವ ಸರ್ಕಾರ ಸಾಲದ ಮಾಹಿತಿ 2017–18ರ ಪ್ರಕಾರ, ಸರ್ಕಾರದ ಸಾಲ 2014ರಲ್ಲಿ ₹68.7 ಲಕ್ಷ ಕೋಟಿ ಹಾಗೂ 2011ರಲ್ಲಿ ₹47.6 ಲಕ್ಷ ಕೋಟಿ ಇತ್ತು.

ಒಟ್ಟು ಸಾಲ ₹97 ಲಕ್ಷ ಕೋಟಿಯಲ್ಲಿ ಕೇಂದ್ರ ಸರ್ಕಾರದ ಸಾಲದ ಮೊತ್ತ ₹68.8 ಲಕ್ಷ ಕೋಟಿ ಅಥವಾ ಒಟ್ಟು ಸಾಲದ ಪ್ರಮಾಣದಲ್ಲಿ ಶೇ 71. ಸಾಲದ ಪ್ರಮಾಣವು 2014ರ ಮಾರ್ಚ್‌ನಿಂದ ಶೇ 49ರಷ್ಟು ಏರಿಕೆ ಕಂಡಿದೆ.

ಸರ್ಕಾರದ ಸಾಮಾನ್ಯ ಸಾಲವು ಸಾರ್ವಜನಿಕ ಸಾಲಗಳನ್ನು ಒಳಗೊಂಡಿರುವುದಾಗಿದೆ. ಇದು ಮಾರುಕಟ್ಟೆಯಿಂದ ಪಡೆಯಲಾದ ಆಂತರಿಕ ಸಾಲಗಳನ್ನೂ ಹೊಂದಿರುತ್ತದೆ. ಭದ್ರತಾ ಪತ್ರಗಳು ಇತರೆ ಬಾಂಡ್‌ಗಳ ಮೂಲಕ ಮಾರುಕಟ್ಟೆ ಸಾಲ ಪಡೆಯಲಾಗುತ್ತದೆ. ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ, ಪಿಎಫ್‌ ಸೇರಿದಂತೆ ಇತರೆ ಸಂಗ್ರಹಗಳಿಂದ ಪಡೆಯುವ ಸಾಲವನ್ನು ಇತರೆ ಸಾಲಗಳಿಗೆ ಸೇರಿಸಲಾಗುತ್ತದೆ. ಈ ಸಾಲಗಳ ಮೊತ್ತ 2017–18ರಲ್ಲಿ ₹9.1 ಲಕ್ಷ ಕೋಟಿ, ಮಾರ್ಚ್‌ 2014ರಿಂದ ಇದರ ಪ್ರಮಾಣ ಶೇ 30ರಷ್ಟು ಏರಿಕೆ ಕಂಡಿದೆ.

ಇದು ಸರ್ಕಾರ ಮಾಡಿರುವ ಸಾಲ, ರಾಷ್ಟ್ರದ ಸಾಲವಾಗಿದ್ದರೂ; ಇದನ್ನು ತೀರಿಸಲು ತೆರಿಗೆಗಳ ಮೂಲಕ ಸಾರ್ವಜನಿಕರಿಂದಲೇ ಹಣ ವಸೂಲಿ ಮಾಡಲಾಗುತ್ತದೆ. ಸರ್ಕಾರದ ಸಾಮಾನ್ಯ ಸಾಲ ಪ್ರತಿಯೊಬ್ಬ ಪ್ರಜೆಗೆ ಹೊರೆಯಾಗುತ್ತದೆ. ಇದರೊಂದಿಗೆ ಕೃಷಿ ಸಾಲ ₹10.7 ಲಕ್ಷ ಕೋಟಿ, 2014ರಿಂದ ಕೃಷಿ ಸಾಲದ ಪ್ರಮಾಣ ಶೇ 44ರಷ್ಟು(7 ಲಕ್ಷ) ಹೆಚ್ಚಳವಾಗಿದೆ. ಇನ್ನೂ ವಸೂಲಿಯಾಗದ ಸಾಲದ ಪ್ರಮಾಣ, 2018ರ ಮಾರ್ಚ್‌ ವರೆಗೂ ₹10.4 ಲಕ್ಷ ಕೋಟಿ; ಇದರಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ಸಾಲದ ಪಾಲು ಶೇ 80.

ಬ್ಯಾಂಕ್‌ಗಳಿಂದ ಪಡೆದಿರುವ ವೈಯಕ್ತಿಕ ಸಾಲ:ಆರ್‌ಬಿಐ ಮಾಹಿತಿ ಪ್ರಕಾರ, 2018ರ ನವೆಂಬರ್‌ ವರೆಗೂ ಜನರು ಪಡೆದಿರುವ ವೈಯಕ್ತಿಕ ಸಾಲದ ಮೊತ್ತ ₹20.7 ಲಕ್ಷ ಕೋಟಿ. ಈ ಮೊತ್ತವನ್ನು ಸಾರ್ವಜನಿಕವಾಗಿ ಹಂಚಿಕೆ ಮಾಡಿದರೆ, ತಲಾ ₹15,486 ಆಗುತ್ತದೆ. 2014ರ ನವೆಂಬರ್‌ನಿಂದ ವೈಯಕ್ತಿಕ ಸಾಲ ಪಡೆಯುವ ಪ್ರಮಾಣ ಶೇ 86ರಷ್ಟು ಹೆಚ್ಚಿದ್ದು, ವಾರ್ಷಿಕ ಶೇ 22ರಷ್ಟು ದಾಖಲಾಗಿದೆ. 2010–2014ರ ನಡುವೆ ವಾರ್ಷಿಕ ಸಾಲ ಪಡೆಯುವ ಪ್ರಮಾಣ ಶೇ 17ರಷ್ಟು ಮಾತ್ರ ಹೆಚ್ಚಳ ಕಂಡಿತ್ತು.

ವೈಯಕ್ತಿಕ ಸಾಲಗಳ ಪೈಕಿ, ಮದುವೆ ಅಥವಾ ಅನಾರೋಗ್ಯದ ಸಮಸ್ಯೆಗಳಿಗಾಗಿ ಪಡೆಯುವ ಸಾಲದಲ್ಲಿ ಶೇ 147, ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಸಾಲದಲ್ಲಿ ಶೇ 189, ಗೃಹ ಸಾಲ ಶೇ 81 ಹಾಗೂ ವಾಹನ ಸಾಲ ಶೇ 66ರಷ್ಟು ಏರಿಕೆಯಾಗಿದೆ. ದೇಶದ ಮಧ್ಯಮ ವರ್ಗದ ಜನರು ಹೆಚ್ಚು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

error: Content is protected !! Not allowed copy content from janadhvani.com