janadhvani

Kannada Online News Paper

ನನ್ನ ಕಾರ್ಯವೈಖರಿ ಇಷ್ಟವಾಗದಿದ್ದರೆ ರಾಜಿನಾಮೆಗೂ ಸಿದ್ಧ -ಸಿಎಂ

ಬೆಂಗಳೂರು:‘ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ನಾನು ಕಾರ್ಯನಿರ್ವಹಿಸುವ ಶೈಲಿಯೇ ಹೀಗೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಹೇಳಿದರು.

ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಭಾನುವಾರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾಕರ ಎತ್ತರಿಸಿದ ರಸ್ತೆ ಕಾರಿಡಾರ್, ಸಬ್ ಅರ್ಬನ್ ರೈಲು, ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ. ಬೆಂಗಳೂರಿಗೆ ಒಟ್ಟು 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ’ ಎಂದರು.

ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ‘ಸಿದ್ದರಾಮಯ್ಯ ನಮ್ಮ ನಾಯಕ’ ಎಂದಿದ್ದರು. ಈ ಬಗ್ಗೆ ಎಎನ್‌ಐ ಕೇಳಿರುವ ಪ್ರಶ್ನೆಗೆ ಸಿಎಂ ಪ್ರತಿಕ್ರಿಯಿಸಿದ್ದು, ‘ಆ ಬಗ್ಗೆ ಪ್ರತಿಕ್ರಿಯಿಸಲು ನಾನು ಸೂಕ್ತ ವ್ಯಕ್ತಿಯಲ್ಲ. ಕಾಂಗ್ರೆಸ್‌ ಮುಖಂಡರು ತಮ್ಮ ಶಾಸಕರನ್ನು ನಿಯಂತ್ರಿಸಿಕೊಳ್ಳಬೇಕು. ಇದು ಹೀಗೆಯೇ ಮುಂದುವರಿದರೆ, ನಾನು ಸ್ಥಾನದಿಂದ ಕೆಳಗಿಳಿಯಲು ಸಿದ್ಧ’ ಎಂದರು

ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಅವರು ಆ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಇದು ಆಕ್ಷೇಪಾರ್ಹ ಹಾಗೂ ಶಿಸ್ತು ಮೀರಿದ ಹೇಳಿಕೆ. ಅವರಿಗೆ ನೋಟಿಸ್ ನೀಡುತ್ತೇನೆ. ಪಕ್ಷ ಇದನ್ನು ಗಂಭಿರವಾಗಿ ಪರಿಗಣಿಸಲಿದೆ’ ಎಂದರು.

‘ಮೈತ್ರಿ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಬಿಡಿಎ ಅಧ್ಯಕ್ಷರಿಗೆ ಯಾವುದೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದು. ಬೆಂಗಳೂರು ಅಭಿವೃದ್ಧಿ ಸಚಿವರ ಜೊತೆ ಚರ್ಚಿಸಬಹುದು ಎಂದರು.

error: Content is protected !! Not allowed copy content from janadhvani.com