janadhvani

Kannada Online News Paper

ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ಬೆಳಗ್ಗೆ 7 ಗಂಟೆಗೆ ದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಇತ್ತೀಚೆಗೆ H1N1 ಸೋಂಕಿಗೆ ತುತ್ತಾಗಿದ್ದು, ಮಂಗಳವಾರ ತಮ್ಮ 88ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
“ಕರ್ನಾಟಕದ ಮಂಗಳೂರು ಮೂಲದವರಾದ ಫರ್ನಾಂಡಿಸ್ ಅವರು ಜನತಾ ಪರಿವಾರದ ಮಹಾನಾಯಕರಾಗಿ ಗುರುತಿಸಿಕೊಂಡಿದ್ದು, ವಾಜಪೇಯಿ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಮುಖ್ಯ ಮಂತ್ರಿ ಕುಮಾರಸ್ವಾಮಿ ಸಂತಾಪ :
ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಜಾರ್ಜ್ ಫರ್ನಾಂಡಿಸ್ ಅವರು ಮಹತ್ವದ ಸಮಾಜವಾದಿಯಾಗಿದ್ದರಲ್ಲದೆ ರಾಜಕೀಯ ಕ್ಷೇತ್ರದ ಪ್ರಮುಖರಾಗಿದ್ದರು. ಕೊಂಕಣ ರೈಲ್ವೆ ಯೋಜನೆಯ ಹಿಂದಿನ ಮಹತ್ವದ ಶಕ್ತಿಯಾಗಿದ್ದರು.
ಈ ಯೋಜನೆಗೆ ಅವರು ನೀಡಿದ ಕೊಡುಗೆಗಾಗಿ ರಾಜ್ಯದ ಜನತೆ ಅವರನ್ನು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಸಿದ್ದರಾಮಯ್ಯ ಸಂತಾಪ: ಮಾಜಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಸೂಚಿಸಿದ್ದಾರೆ. ”ಜಾರ್ಜ್ ಫರ್ನಾಂಡಿಸ್ ನಿಧನದಿಂದ ಆಘಾತಕೀಡಾಗಿದ್ದೇನೆ. ಸಮಾಜವಾದಿ ಚಳುವಳಿಯ ನೇತಾರರಾಗಿದ್ದ ಜಾರ್ಜ್ ನನಗೆ ರಾಜಕೀಯ ಸಂಗಾತಿಯಾಗಿದ್ದದ್ದು ಮಾತ್ರವಲ್ಲ ಹಿರಿಯಣ್ಣನಂತೆ ಮಾರ್ಗದರ್ಶಕರಾಗಿದ್ದರು. ಅವರನ್ನು ಕಳೆದುಕೊಂಡ ದು:ಖ ಮಾಯುವಂತಹದ್ದಲ್ಲ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ಸಂತಾಪ: ‘ಜಾರ್ಜ್‌ ಫರ್ನಾಂಡಿಸ್ ನಿಧನವು ತೀವ್ರ ದುಃಖವುಂಟುಮಾಡಿದೆ. ಸರಳತೆಯಿಂದಲೇ ದೇಶದ ಜನರ ಮನಸ್ಸು ಗೆದ್ದಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು. ಅವರು ಕನ್ನಡಿಗರು ಎನ್ನುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿತ್ತು ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ: ಕೇಂದ್ರದ ಮಾಜಿ ಸಚಿವ, ಸಮಾಜವಾದಿ ನಾಯಕ ಮತ್ತು ಹೆಸರಾಂತ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ದೇಶದ ಜನ ಸಮುದಾಯಗಳಿಗೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶೋಕಿಸಿದ್ದಾರೆ.

ಸಚಿವ ಜಿ.ಟಿ.ದೇವೇಗೌಡ ಸಂತಾಪ: ಕೇಂದ್ರ ಮಾಜಿ ರಕ್ಷಣಾ ಸಚಿವರ ನಿಧನಕ್ಕೆ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಜಿ.ಟಿ.ದೇವೇಗೌಡ ಸಹ ಸಂತಾಪ ಸೂಚಿಸಿದ್ದಾರೆ. ”ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಹೊಂದಿದ್ದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ನಿಧನದಿಂದ ಸಂಭಾವಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ. 88ವರ್ಷದ ಜಾರ್ಜ್ ಮಂಗಳೂರಿನಲ್ಲಿ ಜನಿಸಿ ಮುಂಬೈನಲ್ಲಿ ಗೆದ್ದು ದೆಹಲಿ ರಾಜಕಾರಣವನ್ನು ಆಳಿದವರು.” 
” ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಆಡಳಿತದ ವಿರುದ್ಧ ತೀರ್ವ ತರ ಹೋರಾಡಿದ್ದ ಜಾರ್ಜ್ ಒಬ್ಬ ಸರಳ ಜೀವಿಯಾಗಿ ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಕೇಂದ್ರದಲ್ಲಿ ರೈಲ್ವೆ ಮತ್ತು ರಕ್ಷಣಾ ಸಚಿವರಾಗಿ ಅಮೋಘ ಕೆಲಸಗಳನ್ನು ಮಾಡಿದ್ದ ಜಾರ್ಜ್, ನಮ್ಮ ಕರ್ನಾಟಕಕ್ಕೆ ” ಕೊಂಕಣ ರೈಲ್ವೆ ” ಆರಂಭಿಸುವಲ್ಲಿ ತೀವ್ರ ಶ್ರದ್ಧೆ ವಹಿಸಿದ್ದರು. 
1987 ರಲ್ಲಿ ನಾನು ಮೈಸೂರಿನ ಇಲ್ವಾಲ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾಗ ಸ್ವತ: ಜಾರ್ಜ್ ನನ್ನ ಪರವಾಗಿ ಕ್ಷೇತ್ರದಲ್ಲೆಲ್ಲ ಪ್ರಚಾರ ಮಾಡಿ, ನನ್ನ ಗೆಲುವಿಗೆ ಕಾರಣಕರ್ತರಾಗಿದ್ದರು. ಇವರ ನಿಧನ ವೈಯುಕ್ತಿಕವಾಗಿ ನನಗೆ ತುಂಬಲಾರದ ನಷ್ಟ. ಇವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಚಿರಶಾಂತಿ ನೀಡಲಿ” ಎಂದು ಸಚಿವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.     

ಹಿನ್ನೆಲೆ :  1930 ಜೂನ್ 3ರಂದು ಮಂಗಳೂರಿನಲ್ಲಿ ಜನಿಸಿದ ಜಾರ್ಜ್ ಫರ್ನಾಂಡಿಸ್,  ತಮ್ಮ 19ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಸಮಾಜವಾದಿ ನಾಯಕ ಲೋಹಿಯಾ ಪರಿಚಯದಿಂದ ಹೋರಾಟ ಆರಂಭ ಮಾಡಿದ್ದರು. ಸರಳ ಜೀವಿ ಹಾಗೂ ಅಪ್ರತಿಮ ಹೋರಾಟಗಾರರಾಗಿದ್ದ ಅವರು ಕಾರ್ಮಿಕ ಚಳವಳಿಯಲ್ಲಿ ಅಗ್ರಗಣ್ಯ ನಾಯಕರಾಗಿ ರೂಪುಗೊಂಡು, ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕರನ್ನು ಸೋಲಿಸುವಲ್ಲಿ ಯಶಸ್ವಿಯಾದರು. 

ಬಳಿಕ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಪಡೆದು, ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೈಗಾರಿಕೆ ಸಚಿವರಾದರು. ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆ ಆರಂಭ ಮಾಡಿದ್ದು, ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿದ್ದಾಗ ಬಿಜೆಪಿ ಜೊತೆ ಕೈಜೋಡಿಸಿದರು. 

1998ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಜಾರ್ಜ್ ರಕ್ಷಣಾ ಸಚಿವರಾದರು.  ಅಪ್ರತಿಮ ಹೋರಾಟಗಾರ, ಸರಳ ಜೀವಿ,ದೇಶಭಕ್ತ ಹಾಗೂ ಹಿರಿಯ ರಾಜಕೀಯ ಮುಖಂಡನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

error: Content is protected !! Not allowed copy content from janadhvani.com