janadhvani

Kannada Online News Paper

ಹತ್ರಾಸ್: ನಾಲ್ವರು ಆರೋಪಿಗಳು ಪದೇ ಪದೇ ದೌರ್ಜನ್ಯ ಎಸಗುತ್ತಿದ್ದರು- ಸಂತ್ರಸ್ತೆಯ ತಾಯಿ

ಹತ್ರಾಸ್​:ದೇಶವೇ ತಲೆತಗ್ಗಿಸುವಂತೆ ಮಾಡಿದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಅಮಾನವೀಯ ರೀತಿಯ ಅಂತ್ಯಕ್ರಿಯೆ ಸಂಬಂಧಪಟ್ಟಂತೆ ದಿನಕ್ಕೊಂದು ಹೊಸ ವಿಷಯ ಬೆಳಕಿಗೆ ಬರುತ್ತಿದೆ. ಇದೀಗ ಯುವತಿಯ ತಾಯಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅತ್ಯಾಚಾರಿಗಳ ಬಗ್ಗೆ ಇನ್ನೊಂದು ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದಲೂ ಈ ನಾಲ್ವರು ನನ್ನ ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂದು ತಿಳಿಸಿದ್ದಾರೆ. ನನ್ನ ಮಗಳು ಮನೆಗೆ ಬಂದು ಇದನ್ನು ಹೇಳಿಕೊಂಡಿದ್ದಳು. ಆದರೆ ನಾವೇ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇಷ್ಟು ಭೀಕರ ಪರಿಸ್ಥಿತಿ ಎದುರಾಗುತ್ತದೆ..ಅವಳ ಜೀವವೇ ಹೋಗುವ ಮಟ್ಟಕ್ಕೆ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಈಗ ಗೋಳಾಡಿದ್ದಾರೆ.

ಅದರಲ್ಲೂ ಸಂದೀಪ್​ ಮತ್ತು ಲವ್​ಕುಶ್​ ಇಬ್ಬರೂ ನನ್ನ ಮಗಳನ್ನು ಹಲವು ಬಾರಿ ಬೆನ್ನಟ್ಟಿ ಬಂದಿದ್ದರಂತೆ. ಹಾಗೇ ಕೈ ಅಡ್ಡ ಇಟ್ಟು ಮುಂದೆ ಹೋಗದಂತೆ ತಡೆದಿದ್ದರಂತೆ. ಮಗಳೇ ಹೇಳಿಕೊಂಡಿದ್ದಳು ಎಂದು ಅತ್ತಿದ್ದಾರೆ.
ಪದೇಪದೆ ಇವರಿಂದ ದೌರ್ಜನ್ಯಕ್ಕೀಡಾದ ನನ್ನ ಮಗಳು ಕೊನೆಕೊನೆಗೆ ಒಬ್ಬಳೇ ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಳು. ಒಂದು ಸೋಪು ಬೇಕೆಂದರೂ ಅತ್ತಿಗೆಯನ್ನು ಕರೆದುಕೊಂಡೇ ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ. ಹಾಗೇ ಒಂದು ದಿನ ಅತ್ತಿಗೆಯ ಜತೆಯಲ್ಲಿದ್ದಾಗಲೇ ಆಕೆಗೆ ಚುಡಾಯಿಸಿದ್ದರು. ಆಗ ಅವಳ ಅತ್ತಿಗೆ ಆರೋಪಿಗಳನ್ನು ಹೆದರಿಸಿ, ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟಾದರೂ ಅವರ ಕಿರುಕುಳ ನಿಂತಿರಲಿಲ್ಲ ಎಂದೂ ಹೇಳಿದ್ದಾರೆ.