janadhvani

Kannada Online News Paper

ಹೆಣ್ಮಕ್ಕಳ ಸಂಸ್ಕಾರ ಕೊರತೆ ಅತ್ಯಾಚಾರಕ್ಕೆ ಕಾರಣ- ಬಿಜೆಪಿ ಶಾಸಕನ ಹೇಳಿಕೆಗೆ ವ್ಯಾಪಕ ಆಕ್ರೋಶ

ಲಕನೌ: ಹತ್ರಾಸ್ ದಲಿತ ಯುವತಿ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ . ಅತ್ಯಾಚಾರವನ್ನು ತಡೆಗಟ್ಟಲು ಹೆಣ್ಣುಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

“ಅತ್ಯಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಮೈಗೂಡಿಸಿ, ಸಂಸ್ಕಾರದ ವಾತಾವರಣದಲ್ಲಿ ಅವರನ್ನು ಬೆಳೆಸುವ ಜವಾಬ್ದಾರಿ ತಂದೆ-ತಾಯಿಯರ ಮೇಲಿದೆ” ಬದಲಾಗಿ ಉತ್ತಮ ಆಡಳಿತ ಅಥವಾ ತಲ್ವಾರ್‌ನಿಂದ ಇದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

‘ನಾನು ಶಾಸಕನಾಗಿದ್ದರೂ ಶಿಕ್ಷಕನಾಗಿದ್ದೇನೆ. ಅತ್ಯಾಚಾರದಂತಹ ಘಟನೆಗಳನ್ನು ಕೇವಲ ಸಂಸ್ಕಾರ (ಸಂಸ್ಕೃತಿ) ಮೂಲಕ ಮಾತ್ರ ನಿಲ್ಲಿಸಬಹುದು, ಬದಲಾಗಿ ಉತ್ತಮ ಆಡಳಿತ ಅಥವಾ ಖಡ್ಗ ಅಥವಾ ಬಲದಿಂದ ಮಾತ್ರ ನಿಲ್ಲಿಸಲು ಅಸಾಧ್ಯ ಎಂದಿದ್ದಾರೆ.

ಶಾಸಕರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಸೂಕ್ಷ್ಮ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಖಂಡಿಸಿದ್ದಾರೆ. ಇಂತಹ ಹೇಳಿಕೆಗಳು ಮಹಿಳಾ ವಿರೋಧಿಯಾಗಿವೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ದರು. ಈ ಹಿಂದೆ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಭಯೋತ್ಪಾದಕ ಅಲ್ಲ ಎಂಬ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು.

error: Content is protected !! Not allowed copy content from janadhvani.com