ಕೋಝಿಕ್ಕೋಡ್: ಇಸ್ಲಾಮ್ ಧರ್ಮ ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಫಾ.ಜೋಸೆಫ್ ಪುತ್ತನ್‌ಪುರಕ್ಕಲ್ ಕ್ಷಮೆಯಾಚಿಸಿದ್ದಾರೆ. ಅವರು ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಬಗ್ಗೆ ಕ್ಷಮೆ ಕೋರಿದ್ದು, ನಾನು ಇಸ್ಲಾಮ್ ಧರ್ಮವನ್ನು ವಿರೋಧಿಸುವುದಿಲ್ಲ ಅಥವಾ ಟೀಕಿಸುವುದಿಲ್ಲ. ನಾನು ಉದ್ದೇಶಿಸದ ರೀತಿಯಲ್ಲಿ ಭಾಷಣದ ವೀಡಿಯೊ ಹರಡುತ್ತಿದೆ. ಇದು ಖಾಸಗಿ ಸಮಾರಂಭದಲ್ಲಿ ಮಾಡಿದ ಭಾಷಣವಾಗಿದೆ.
ಲವ್ ಜಿಹಾದ್, ನೈಜೀರಿಯಾದಲ್ಲಿ ನಡೆದ ಕ್ರಿಶ್ಚಿಯನ್ ಹತ್ಯಾಕಾಂಡ ಮತ್ತು ಇತರ ಕೆಲವು ದೇಶಗಳಲ್ಲಿ ಕ್ರಿಶ್ಚಿಯನ್ನರ ಹತ್ಯೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಾಗಿತ್ತು. ಆದರೆ ಅದು ಅನೇಕ ಜನರಿಗೆ ನೋವುಂಟು ಮಾಡಿರುವುದು ಕಂಡುಬಂದಿದೆ. ಆ ಬಗ್ಗೆ ವಿಷಾದ ಮತ್ತು ಕ್ಷಮೆಯಾಚನೆ ಮಾಡುತ್ತಿದ್ದೇನೆ. ನಾನು ಯಾರನ್ನೂ ಉದ್ದೇಶ ಪೂರ್ವಕವಾಗಿ ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಫಾ.ಜೋಸೆಫ್ ಹೇಳಿದ್ದಾರೆ.
“ಪೌರತ್ವ ಕಾನೂನಿನ ತಿದ್ದುಪಡಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಆದರೆ ನಾವು ಇನ್ನೊಂದು ಕಡೆಯನ್ನೂ ನೆನಪಿಸಿಕೊಳ್ಳಬೇಕು ಎಂದು ಜೋಸೆಫ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಟಿಪ್ಪು ಸುಲ್ತಾನ್ ಕೇರಳದಲ್ಲಿ ನಡೆಸಿದ ಕೆಲವು ದೌರ್ಜನ್ಯಗಳನ್ನು ಪ್ರಸ್ತಾಪಿಸಿದ್ದರು. ಕುದುರೆಯನ್ನೇರಿ ಬಂದಿದ್ದ ಟಿಪ್ಪು ಮತ್ತು ಸೈಕನಿಕರು, ಕ್ರೈಸ್ತರನ್ನು ಗುಂಡಿಕ್ಕಿ ಕೊಂದನು. ಹಿಂದೂಗಳನ್ನು ನಿರ್ಮೂಲನೆ ಮಾಡಿದನು. ಅವರನ್ನು ಬಲವಂತವಾಗಿ ಮತಾಂತರಿಸಿದನು. ಮಲಬಾರಿಗರು ಇಸ್ಲಾಮ್‌ಗೆ ಮತಾಂತರಗೊಂಡಿಲ್ಲ. ಅವರನ್ನು ಬೆದರಿಕೆ ಮೂಲಕ ಮತಾಂತರಗೊಳಿಸಿದರು ಎಂದು ತನ್ನ ಭಾಷಣದಲ್ಲಿ ಫಾದರ್ ಹೇಳಿದ್ದರು.”
“ಮುಸ್ಲಿಮರ ಪೌರತ್ವ ಕಾನೂನಿನ ತಿದ್ದುಪಡಿ ತಪ್ಪು. ಮುಸ್ಲಿಮರಿಗೆ ನ್ಯಾಯವನ್ನು ನಿರಾಕರಿಸಿದಂತೆಯೇ, ನಮಗೂ ನಿರಾಕರಿಸಬಹುದು. ಆದರೆ ಮುಸ್ಲಿಮರನ್ನು ನಂಬಲು ಸಾಧ್ಯವಿಲ್ಲ. ಶಿವಸೇನೆ ಇರುವ ಕಾರಣ ನಾವು ಬೊಂಬೈಯಲ್ಲಿ ನಿಲೆ ನಿಂತಿದ್ದೇವೆ. ಇಲ್ಲದಿದ್ದರೆ ಮುಸ್ಲಿಮರು ನಮ್ಮನ್ನು ನಿರ್ಮೂಲನೆ ಮಾಡುತ್ತಿದ್ದರು. ಹಿಂದೂಗಳಿಗಿಂತ ಮುಸ್ಲಿಮರಿಗೆ ಧರ್ಮಾಂಧತೆ ಹೆಚ್ಚು ಎಂದು ಹೇಳದಿರುವುದು ಸಾಧ್ಯವಿಲ್ಲ. ಮುಸ್ಲಿಮರು ಪ್ರಪಂಚದಾದ್ಯಂತ ನಮ್ಮನ್ನು ಕೊಲ್ಲುತ್ತಿದ್ದಾರೆ. ನಾವು ಭಾರತದಲ್ಲಿ ಬಹಳ ತಾಳ್ಮೆ ಹೊಂದಿದ್ದೇವೆ. ಈ ಮತಾಂಧರು ಬಂದಾಗ ಈ ಕೋಲಾಹಲ ಉಂಟಾಗಿದೆ” ಎಂದು ಫಾ.ಜೋಸೆಫ್ ತನ್ನ ಧ್ವೇಷ ಭಾಷಣದಲ್ಲಿ ಹೇಳಿದ್ದರು.






