ನವದೆಹಲಿ(ಜುಲೈ 25): ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದ್ದ ಅತೃಪ್ತ ಶಾಸಕರಿಂದಲೇ ರಾಜ್ಯ ವಿಧಾನಸಭೆಯ ಮುಂದಿನ ಹಣೆಬರಹ ನಿರ್ಧಾರವಾಗಬೇಕು. ಹೀಗಾಗಿ, ಅವರ ಪ್ರತಿಯೊಂದು ನಡೆಯ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಹೀಗಾಗಿಯೇ, ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಮುಂಬೈನಿಂದ ವಾಪಸ್ ರಾಜ್ಯಕ್ಕೆ ಬಂದಿದ್ದು ಎಲ್ಲರೂ ಕುತೂಹಲದಿಂದ ನೋಡುವಂತಾಗಿದೆ. ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಈ ಅತೃಪ್ತರ ಮುಂದಿನ ನಡೆಗಳ ಬಗ್ಗೆ ಚಿಂತೆ ಶುರುವಾಗಿದೆ.
ವಿಶ್ವಾಸ ಮತಯಾಚನೆಯಲ್ಲಿ ಮೈತ್ರಿಸರ್ಕಾರಕ್ಕೆ ಕೈಕೊಟ್ಟಂತೆ ರೆಬೆಲ್ ಶಾಸಕರು ಬಿಜೆಪಿಗೂ ಕೈಕೊಟ್ಟುಬಿಟ್ಟರೆ ಹೇಗೆ ಎಂಬ ಪ್ರಶ್ನೆ ಅಮಿತ್ ಶಾ ಅವರನ್ನು ಕಾಡುತ್ತಿದೆ. ಮುಂಬೈನಲ್ಲಿರುವ ಅತೃಪ್ತ ಶಾಸಕರ ಪ್ರತಿಯೊಂದು ನಡೆಯ ಮೇಲೂ ಅಮಿತ್ ಶಾ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬುಡವನ್ನೇ ಅಲುಗಾಡಿಸಿ ಉರುಳಿಸಿದ ಈ ಶಾಸಕರು ತಮಗೆ ದ್ರೋಹ ಮಾಡುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ ಎಂಬುದು ಬಿಜೆಪಿ ರಾಷ್ಟ್ರಾಧ್ಯಕ್ಷರ ತಲೆ ಕೊರೆಯುತ್ತಿರುವ ಭಯವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೂ ಇದೇ ವಿಚಾರವನ್ನು ಅಮಿತ್ ಶಾ ಪ್ರಸ್ತಾಪಿಸಿದ್ದಾರೆನ್ನಲಾಗಿದೆ.
ಹೀಗಾಗಿಯೇ ಅಮಿತ್ ಶಾ ಅವರು ಕಾದುನೋಡುವ ತಂತ್ರ ಅನುಸರಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನಿಡಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ರಚನೆಗೆ ಮುಂದೋಡದಿರಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆಗಳನ್ನೂ ನೀಡಿದ್ದಾರೆ. ಸ್ಪೀಕರ್ ನಿರ್ಧಾರ ಕೈಗೊಳ್ಳುವವರೆಗೂ ಸರ್ಕಾರದ ರಚನೆಗೆ ಪ್ರಯತ್ನಿಸಬೇಡಿ ಎಂಬ ಖಡಕ್ ಸಂದೇಶವನ್ನು ಅಮಿತ್ ಶಾ ರವಾನಿಸಿದ್ದಾರೆನ್ನಲಾಗಿದೆ.
ನಿನ್ನೆ ನಡೆಯಬೇಕಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನೂ ಇದೇ ಕಾರಣಕ್ಕೆ ಮುಂದಕ್ಕೆ ಹಾಕಲಾಗಿದೆ. ಈ ಸಭೆಯಲ್ಲಿ ಬಿಜೆಪಿಯ ಸರ್ಕಾರ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳುವುದಿತ್ತು. ರಾಜ್ಯದ ಬಿಜೆಪಿ ಮುಖಂಡರನ್ನೂ ಈ ಸಭೆಗೆ ಆಹ್ವಾನಿಸುವುದಿತ್ತು. ಆದರೆ ನಿನ್ನೆ ಅದ್ಯಾವುದೂ ನಡೆದಿಲ್ಲ.
ಇವತ್ತು ಸಿಎಂ ಆಕಾಂಕ್ಷಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ನಾಯಕರ ನಿಯೋಗವೊಂದನ್ನು ಇವತ್ತು ದೆಹಲಿಗೆ ಕಳುಹಿಸಿಕೊಟ್ಟಿದ್ದರು. ಜಗದೀಶ್ ಶೆಟ್ಟರ್ ನೇತೃತ್ವದ ಈ ನಿಯೋಗದಲ್ಲಿ ಕೆ.ಜಿ. ಬೋಪಯ್ಯ, ಮಾಧುಸ್ವಾಮಿ ಮತ್ತು ಅರವಿಂದ್ ಲಿಂಬಾವಳಿ ಅವರಿದ್ದರು. ಅತೃಪ್ತರು ಮೈತ್ರಿಪಾಳಯಕ್ಕೆ ಮರಳುವ ಸಾಧ್ಯತೆಯೇ ಇಲ್ಲ. ಬಿಜೆಪಿಗೇ ಅವರ ಬೆಂಬಲ ಇರುತ್ತದೆ ಎಂದು ಈ ನಿಯೋಗವು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿತ್ತು. ಆದರೆ, ಅತೃಪ್ತ ಶಾಸಕ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ನಿರ್ಧಾರ ಕೈಗೊಂಡ ಬಳಿಕವಷ್ಟೇ ಮುಂದಿನ ಹೆಜ್ಜೆ ಇಡೋಣ ಎಂದು ಅಮಿತ್ ಶಾ ಹೇಳಿ ಕಳುಹಿಸಿದ್ದಾರೆನ್ನಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಅಮಿತ್ ಶಾ ಅವರು ಮತ್ತೊಮ್ಮೆ ರಾಜ್ಯ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಹಾಗೆಯೇ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಅವರು ಎಲ್ಲ ಬಿಜೆಪಿ ಶಾಸಕರಿಗೂ ಎಲ್ಲಿಯೂ ಹೊರಹೋಗದಂತೆ ಸೂಚನೆ ನೀಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ
ಪರೀಕ್ಷೆಗೂ ಹಿಜಾಬ್ ಗೂ ಸಂಬಂಧವಿಲ್ಲ- ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಣೆ
ಜನಾದೇಶವಿಲ್ಲದೆ ಬಿಜೆಪಿಗೆ ಗೆಲುವು: ಇದು ಇವಿಎಂ ದುರ್ಬಳಕೆ- ಸಂಘಟಿತ ಹೋರಾಟಕ್ಕೆ ಕಾಂಗ್ರೆಸ್ಗೆ ದೀದಿ ಆಹ್ವಾನ