janadhvani

Kannada Online News Paper

ಮಂಗಳೂರು, ಫೆಬ್ರವರಿ 15: ಕರಾವಳಿಯ ಬ್ಯಾರಿ ಭಾಷೆಯ ಖ್ಯಾತ ಲೇಖಕ ಅಬ್ದುಲ್ ರಹೀಂ ಟಿ.ಕೆ.(65) ಶುಕ್ರವಾರ ಮಂಗಳೂರಿನಲ್ಲಿ ನಿಧನರಾದರು. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹೀಂ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಬ್ಯಾರಿ ಆಂದೋಲನದ ರೂವಾರಿ ಎಂದೇ ಹೇಳಲಾಗುತ್ತಿದ್ದ ಅಬ್ದುಲ್ ರಹೀಮ್ ಖ್ಯಾತ ಉದ್ಯಮಿ, ಕವಿ, ಲೇಖಕ, ಅನುವಾದಕರಾಗಿ ಗುರುತಿಸಿಕೊಂಡಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಟೀಕೇಸ್ ಕಾನ್ಸೆಪ್ಟ್‌ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಇವರು ಓರ್ವ ಹವ್ಯಾಸಿ ಕವಿ ಮತ್ತು‌ ಲೇಖಕರಾಗಿದ್ದರು. ಸಮಾಜದ ಬಗ್ಗೆ ಕಳಕಳಿ ಇರುವ ಭಾವಜೀವಿಯಾಗಿದ್ದ ಇವರು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿದ್ದರು. ಬ್ಯಾರಿ ಭಾಷಾ ಆಂದೋಲನದಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

1998ರಲ್ಲಿ ಮಂಗಳೂರು ಪುರಭವನದಲ್ಲಿ ನೆರವೇರಿದ ಐತಿಹಾಸಿಕ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿದ್ದ ಅಬ್ದುಲ್ ರಹೀಮ್ ಆನಂತರ ಸ್ಥಾಪನೆಯಾದ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದವರು.

ಇವರ ಅವಧಿಯಲ್ಲಿ 1999ರಲ್ಲಿ ಬಂಟ್ವಾಳದ ನೇರಳ ಕಟ್ಟೆಯಲ್ಲಿ ಜರುಗಿದ 2ನೇ ಮತ್ತು 2001ರಲ್ಲಿ ಉಡುಪಿಯಲ್ಲಿ ನೆರವೇರಿದ 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ದೊರಕಿಸಿ ಕೊಡುವಲ್ಲಿ ಇವರ ಪ್ರಯತ್ನ ಅಪಾರ.

error: Content is protected !! Not allowed copy content from janadhvani.com