janadhvani

Kannada Online News Paper

ಜ.24ಕ್ಕೆ ಕಾಂಗ್ರೆಸ್​​-ಜೆಡಿಎಸ್​​ ಸಮನ್ವಯ ಸಮಿತಿಯ ಮಹತ್ವದ ಸಭೆ

ಬೆಂಗಳೂರು(ಜ.23): ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾಳೆ ಕಾಂಗ್ರೆಸ್​​-ಜೆಡಿಎಸ್​​ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಮೈತ್ರಿ ಸರ್ಕಾರವನ್ನ ಬೆಂಬಿಡದಂತೆ ಕಾಡುತ್ತಿರುವ ಆಪರೇಷನ್​​ ಕಮಲದ ಸಂಕಷ್ಟದ ನಡುವೆಯೂ ಮತ್ತೊಂದು ಬಜೆಟ್​​​ ಮಂಡನೆಗೆ ಸಚಿವ ಸಂಪುಟ ತಯಾರಿ ನಡೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ರಾಜ್ಯ ಸರ್ಕಾರದ ನಾಯಕರು ಪೂರ್ವಭಾವಿಯಾಗಿ ಗುರುವಾರ(ಜ.24) ಸಮನ್ವಯ ಸಮಿತಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಇಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆ ಸುತ್ತ ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಮ್ಮಿಶ್ರ ಸರ್ಕಾರದ ನಾಯಕರು ರೆಸಾರ್ಟ್​ ರಾಜಕಾರಣ ಹಾಗೂ ಆಪರೇಷನ್​​ ಕಮಲದ ಭೀತಿಯಿಂದ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ದೊಡ್ಡ ಯಡವಟ್ಟಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಯಾವುದೇ ತಯಾರಿ ನಡೆಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಇಲ್ಲಿ ಎದುರಾಗಬಹುದಾದ ಇಕ್ಕಟ್ಟು ಸೇರಿದಂತೆ ಬಜೆಟ್​​ ವಿಚಾರವನ್ನು ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಬಿಜೆಪಿಯವರು ಆಪರೇಷನ್​​ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದರು. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ ಶಿವಕುಮಾರ್​​ ಶಾಸಕಾಂಗ ಸಭೆ ಕರೆಯುವ ನೆಪದಲ್ಲಿ ರೆಸಾರ್ಟ್​​ ರಾಜಕಾರಣ ಶುರು ಮಾಡಿದರು. ಅಲ್ಲಿ ಮತ್ತೊಂದು ಯಡವಟ್ಟಾಗಿ ಕಾಂಗ್ರೆಸ್​ ಶಾಸಕರು ನಡುವೇ ಮಾರಾಮಾರಿ ನಡೆದೇಹೋಯ್ತು. ನಂತರ ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ನಿನ್ನೆಯೂ ಮೈತ್ರಿ ಸರ್ಕಾರದ ಕೆಲಸಗಳು ಹಾಗೇ ಉಳಿದಿದ್ದವು. ಆದರಿಂದ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಈ ಎಲ್ಲಾ ಬೆಳವಣೆಗೆಗಳ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.

ಕಾಂಗ್ರೆಸ್​ ಶಾಸಕರ ಬಡಿದಾಟದಿಂದ ಮೈತ್ರಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದರಿಂದ ಜೆಡಿಎಸ್​​ ಶಾಸಕರು ಅಸಮಾಧಾನಗೊಂಡಿದ್ದಾರೆ. ರೆಸಾರ್ಟ್​​ ರಾಜಕಾರಣ, ಮೈತ್ರಿ ಸರ್ಕಾರದ ಉಳಿವು, ಜೆಡಿಎಸ್​​ ಶಾಸಕರಲ್ಲಿನ ಅತೃಪ್ತಿ, ಕಾಂಗ್ರೆಸ್ಸಿನ ಏಕಪಕ್ಷೀಯ ನಿರ್ಧಾರಗಳು, ಲೋಕಸಭೆ ಚುನಾವಣೆಯಲ್ಲಿನ ತಯಾರಿ ಬಗ್ಗೆ ಚರ್ಚೆ ನಡೆಯಲ್ಲಿದೆ. ಇಲ್ಲಿ ಎಲ್ಲಾ ಶಾಸಕರಿಂದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯಲಿದೆ.

ವಿಧಾನಮಂಡಲ ಜಂಟಿ ಅಧೀವೇಶನದಲ್ಲಿ ಸಂಕಷ್ಟವನ್ನು ಹೇಗೆ ಎದುರಿಸಬೇಕು. ಹಾಗೆಯೇ ಬಜೆಟ್​​ ಮಂಡನೆ ತಯಾರಿ ಹೇಗಿರಬೇಕು, ಕಾಂಗ್ರೆಸ್​​ ಶಾಸಕರ ನಿಗಮ ಮಂಡಳಿ ಅಧ್ಯಕ್ಷಗಾದಿಗೆ ಸಿಎಂ ವಿಳಂಬ, ಜೆಡಿಎಸ್‌ ಸಚಿವರ ಖಾತೆಗಳಿಗೆ ಕಾಂಗ್ರೆಸ್​ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿರುವ ಗೊಂದಲ ಸೇರಿದಂತೆ ಹಲವು ಚರ್ಚೆಯಾಗುವ ನಿರೀಕ್ಷೆಯಿದೆ.

error: Content is protected !! Not allowed copy content from janadhvani.com