janadhvani

Kannada Online News Paper

ಹಿಂದುಗಳು ಹಂದಿ ಮೂತ್ರವನ್ನೂ ಕುಡಿಯಲಿ- ಲಕ್ಷ್ಮಣ್ ಗಾಯ್ಕವಾಡ್ ವಿವಾದಾತ್ಮಕ ಹೇಳಿಕೆ

ಧಾರವಾಡ (ಜ. 18) : ಗೋಮೂತ್ರ ಅಮೃತ ಎಂದು ಕುಡಿಯೋರು ಹಂದಿ ಮೂತ್ರವನ್ನು ಅಮೃತವೆಂದು ತಿಳಿದು ಕುಡಿಯಲಿ ಎಂದು ಸಾಹಿತಿ ಲಕ್ಷ್ಮಣ ಗಾಯಕವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ದಲಿತ ಸಂಕಥನ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಹಿಂದುಗಳು ಗೋವು ಪವಿತ್ರ ಅನ್ನುವುದಾದರೆ, ಹಂದಿ ಮತ್ತು ಕತ್ತೆಯನ್ನು ಸಹ ಪವಿತ್ರ ಎಂದು ತಿಳಿಯಲಿ. ಇವು ಕೂಡ ದೇವರ ಅವತಾರಗಳೇ ಆಗಿವೆ ಎಂದರು.
ಇದೇ ವೇಳೆ ಗೋಮೂತ್ರ ಅಮೃತ ಅಂತಾ ಕುಡಿಯುತ್ತಾರೆ. ಹಂದಿ ದೇವಸ್ವರೂಪಿ ಎನ್ನುವ ನೀವು ಅದರ ಮೂತ್ರವನ್ನೂ ಅಮೃತವೆಂದು ಕುಡಿಯಬೇಕಲ್ಲವೇ ಎಂದು ಪ್ರಶ್ನಿಸಿದರು.

ಗೋವು ಮಾತೆ ಅಂತಿರಾ..? ಆದರೆ ನಿಮ್ಮ ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತೀರಿ. ದೇವರ ಅವತಾರವಾದ ವರಾಹ ಮತ್ತು ಕತ್ತೆಯನ್ನು ದಲಿತರಾದ ನಾವು ಪೋಷಿಸುತ್ತೇವೆ. ಹಾಗಾದರೆ ಹಿಂದುಗಳು ಹಂದಿ, ಕತ್ತೆಗಳನ್ನು ಒಂದು ದಿನವಾದರೂ ತಮ್ಮ ಮನೆ ಎದುರು ಕಟ್ಟಲಿ ನೋಡೊಣ ಎಂದು ಸವಾಲನ್ನು ಹಾಕಿದರು. ಇನ್ನು, ರಾಮಾಯಣದ ಬಗ್ಗೆ ದಲಿತ ಸಾಹಿತ್ಯದಲ್ಲಿ ವಿಮರ್ಶೆ ಮಾಡುವುದು ತಪ್ಪಾ ಎಂದು ಹೇಳಿದರು.
ರಾಮನಿಗೂ‌ ಒಂದು ಮರ್ಯಾದೆ ಇತ್ತು, ಆದರೆ ಪತ್ನಿ ಸೀತಾಳನ್ನು ಅರಣ್ಯಕ್ಕೆ ಕಳುಹಿಸಿದ. ಅದರ ಬಗ್ಗೆ ವಿಮರ್ಶೆ ಆಗಬಾರದಾ ಎಂದು ಪ್ರಶ್ನಿಸಿದ ಅವರು, ರಾಮ ರಾಮ ಅಂತಾ ನಮ್ಮನ್ನ ಯಾಕೆ ದೂರ ತಳ್ಳುತ್ತೀರಾ. ಕೆಲವರು ರಾಮನ ಬಗ್ಗೆ ಮಾತನಾಡುವುದು ಬೇಡ ಎನ್ನುವಷ್ಟು ಸಂವೇದನಾಶೀಲರಾಗಿದ್ದಾರೆ. ರಾಮನ ಬಗ್ಗೆ ಲಕ್ಷ್ಮಣನಿಗೆ ಎಷ್ಟು ಗೊತ್ತಿತ್ತು ಇವರಿಗೆ ಎಷ್ಟು ಗೊತ್ತು, ನಾನು ಲಕ್ಷ್ಮಣನಾಗಿ ರಾಮನನ್ನು ನೋಡಲು ಬಯಸುತ್ತೇನೆ ಎಂದರು.
ಅಲ್ಲದೇ ದಲಿತ ಸಾಹಿತ್ಯ ಮಹಾಭಾರತ ಮತ್ತು ರಾಮಾಯಣದ ವಿಮರ್ಶೆ ಬಯಸುತ್ತಿದೆ. ಒಳ್ಳೆಯದನ್ನು ಪಡೆಯೋಣ ಕೆಟ್ಟದನ್ನ ಪುರಾಣದಿಂದಲೇ ಕಿತ್ತು ಹಾಕೋಣ ಎಂದರು.

ಕೃಪೆ:ನ್ಯೂಸ್18

error: Content is protected !! Not allowed copy content from janadhvani.com