janadhvani

Kannada Online News Paper

ಮುಸ್ಲಿಮರು ಜೆಡಿಎಸ್‌ನಿಂದ ದೂರಸರಿಯಲು ಕಾಂಗ್ರೆಸ್‌ ಕಾರಣ-ಎಚ್‌.ಡಿ.ದೇವೇಗೌಡ

ಬೆಂಗಳೂರು: ಜೆಡಿಎಸ್‌ನಿಂದ ಮುಸ್ಲಿಮರು ದೂರವಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ದೂರಿದರು.

ಪಕ್ಷದ ಅಲ್ಪಸಂಖ್ಯಾತರ ಘಟಕ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ‘ಬಿ‘ ಟೀಂ ಎಂದು ನಮ್ಮನ್ನು ಬಿಂಬಿಸಿದವರೇ ಫಲಿತಾಂಶದ ಬಳಿಕ ಸರ್ಕಾರ ರಚನೆಗೆ ನಮ್ಮ ಬಳಿಗೆ ಬಂದರು’ ಎಂದು ಕಟಕಿಯಾಡಿದರು.

‘ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬೀರುವಂತೆ ಷಡ್ಯಂತ್ರ ನಡೆಸಲಾಯಿತು. ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ನಮ್ಮ ಬಳಿ ಬಂದರು. ನಿಮ್ಮ ಮಗನೇ ಮುಖ್ಯಮಂತ್ರಿ ಆಗಬೇಕೆಂದು ಮನವಿ ಮಾಡಿದರು. ಚುನಾವಣೆಯಲ್ಲಿ ಅವರು ನಮ್ಮ ವಿರುದ್ಧ ಅಪಪ್ರಚಾರ ಮಾಡದೇ ಇದ್ದರೆ, ಫಲಿತಾಂಶವೇ ಬೇರೆ ಆಗಿರುತ್ತಿತ್ತು’ ಎಂದು ದೇವೇಗೌಡ ಹೇಳಿದರು.

‘ಜೆಡಿಎಸ್‌ ಯಾವುದೇ ‘ಎ’ ಟೀಂ ಅಥವಾ ‘ಬಿ’ ಟೀಂ ಅಲ್ಲ. ಸ್ವತಂತ್ರ ಅಸ್ತಿತ್ವವುಳ್ಳ ಜನತೆಯ ಟೀಂ ಅಷ್ಟೆ. ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಕಾರಣ ಯಾರು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಕಿವಿ ಹಿಂಡಿದರು.

‘ನನಗೆ ಯಾರ ಬಗ್ಗೆಯೂ ದ್ವೇಷ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಮುರಿಯವುದಿಲ್ಲ. ಕಾಂಗ್ರೆಸ್‌ ನಮ್ಮ ಜತೆಗೆ ಸಹಕರಿಸಬೇಕು’ ಎಂದು ಅವರು ತಿಳಿಸಿದರು.

ಪತನಕ್ಕೆ ಯತ್ನ: ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿ ನಡೆಸಿರುವ ಯತ್ನ ಫಲಿಸುವುದಿಲ್ಲ. ರಾಜ್ಯಪಾಲರ ಆಡಳಿತ ಹೇರಲಾಗುತ್ತದೆ ಎಂಬ ಪ್ರಚಾರ ನಡೆಸಲಾಯಿತು. ಈ ಸಮಾವೇಶಕ್ಕೆ ಬರಲು ಆಗುತ್ತದೆಯೊ ಇಲ್ಲವೋ ಎಂಬ ಸ್ಥಿತಿ ಇತ್ತು. ಇಂತಹ ಘಟನೆಗಳೇ ನನ್ನ ಹೋರಾಟಕ್ಕೆ ಸ್ಫೂರ್ತಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ಸಾಮರ್ಥ್ಯ ಕೇವಲ ದೇವೇಗೌಡರಿಗೆ ಮಾತ್ರ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು

error: Content is protected !! Not allowed copy content from janadhvani.com