janadhvani

Kannada Online News Paper

ಆಪರೇಷನ್ ಕಮಲದ ಭೀತಿ- ಬಂಡಾಯ ಶಾಸಕರಿಗೆ ಸಚಿವ ಸ್ಥಾನ

ಬೆಂಗಳೂರು (ಜ.16): ಆಪರೇಷನ್ ಕಮಲದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್​ ನಾಯಕರು ಬಿಜೆಪಿಯ ಪ್ರಯತ್ನವನ್ನು ವಿಫಲಗೊಳಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ತಂತ್ರ ರೂಪಿಸಿದ್ದು, ಸಂಪುಟದಲ್ಲಿರುವ ನಾಲ್ವರು ಸಚಿವರನ್ನು ಕಿತ್ತು ಹಾಕಿ ಅವರ ಬದಲಾಗಿ ನಾಲ್ವರು ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಕಾಂಗ್ರೆಸ್​ನ ಬಂಡಾಯ ಶಾಸಕರಾಗಿರುವ ಭೀಮಾ ನಾಯ್ಕ್, ಪ್ರತಾಪ್ ಗೌಡ ಪಾಟೀಲ್, ಬಿ. ನಾಗೇಂದ್ರ, ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ನೀಡೋ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಹೈಕಮಾಂಡ್ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಈ ಬಗ್ಗೆ ಘೋಷಣೆ ಮಾಡಲು ಕೈ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ, ಸದ್ಯ ಅಸ್ತಿತ್ವದಲ್ಲಿರುವ ನಾಲ್ವರು ಸಚಿವಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇನ್ನು, ಕಾಂಗ್ರೆಸ್​ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗುವ ಮೂಲಕ ಆಪರೇಷನ್​ ಕಮಲಕ್ಕೆ ದಾಳ ಹಾಕಿರುವ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ ಅವರ ಮನೆಗೆ ಜೆಡಿಎಸ್​ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸುಭದ್ರವಾಗಿರುವ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಜೆಡಿಎಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಆಪರೇಷನ್​ ಕಮಲದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವತ್ಥ ನಾರಾಯಣ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೆಡಿಎಸ್​ ನಿಂದ ಆಪರೇಷನ್​ ದಳ :
ಅತ್ತ ಕಾಂಗ್ರೆಸ್​ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳು ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದರೆ ಇತ್ತ ಜೆಡಿಎಸ್​ ಕೂಡ ಬಿಜೆಪಿ ವಿರುದ್ಧ ತನ್ನ ದಾಳವನ್ನು ನಡೆಸಲು ಮುಂದಾಗಿದೆ. ಈಗಾಗಲೇ ಸಿಎಂ ಎಚ್​.ಡಿ. ಕುಮಾರಸ್ವಾಮಿ ಜೆಡಿಎಸ್​ನ ಕೆಲವು ಶಾಸಕರಿಗೆ ಸೂಚನೆ ನೀಡಿದ್ದು, ಆಪರೇಷನ್​ ಕಮಲಕ್ಕೆ ಪ್ರತಿಯಾಗಿ ಆಪರೇಷನ್​ ದಳ ಮಾಡಲು ಮುಂದಾಗಿದ್ದಾರಾ? ಎಂಬ ಪ್ರಶ್ನೆಗಳು ಏಳುತ್ತಿವೆ.
ಈ ಅನುಮಾನ ಉಂಟಾಗಲು ಕಾರಣವೂ ಇದೆ. ಈಗಾಗಲೇ ಬಿಜೆಪಿಯ ಕೆಲವು ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ ಎಂದಿರುವ ಸಿಎಂ ಕುಮಾರಸ್ವಾಮಿ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಗುಪ್ತಚರ ಇಲಾಖೆಯಿಂದ ಆಪರೇಷನ್ ಕಮಲದ ಪ್ರತಿಯೊಂದು ಮಾಹಿತಿಯನ್ನೂ ಪಡೆಯುತ್ತಿರುವ  ಎಚ್​.ಡಿ. ಕುಮಾರಸ್ವಾಮಿ ಜೆಡಿಎಸ್ ಅತೃಪ್ತ ಶಾಸಕರನ್ನೂ ಸಂಪರ್ಕ ಮಾಡಿದ್ದಾರೆ. ಯಾವುದೇ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಯಾರನ್ನೋ ನಂಬಿಕೊಂಡು ನಿಮ್ಮ ರಾಜಕೀಯ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸಿಎಂ ಗೂಢಚಾರರನ್ನು ಕಳುಹಿಸಿದ್ದಾರಾ ?
ಅತ್ತ ಹರಿಯಾಣದಲ್ಲಿರುವ ಬಿಜೆಪಿ ಶಾಸಕರ ಮೇಲೆ ನಿಗಾ ವಹಿಸಲು ಸಿಎಂ ಕುಮಾರಸ್ವಾಮಿ ತಮ್ಮ ಆಪ್ತರನ್ನು ಮುಂದೆ ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಯಿಂದ ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಕ್ಕೆ ಸಿಎಂ ಪ್ರತಿತಂತ್ರ ರೂಪಿಸಲು ಮುಂದಾಗಿರುವ ಸಿಎಂ ಕುಮಾರಸ್ವಾಮಿ ಆದೇಶದಂತೆ ಈಗಾಗಲೇ ಇಬ್ಬರು ಉದ್ಯಮಿಗಳು ಬಿಜೆಪಿ ಶಾಸಕರಿರೋ ರೆಸಾರ್ಟ್​ಗೆ ತೆರಳಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿಯೇ ಇಬ್ಬರು ಉದ್ಯಮಿಗಳು ರೆಸಾರ್ಟ್​ ಸೇರಿಕೊಂಡಿದ್ದು, ಅಲ್ಲಿರುವ ದಕ್ಷಿಣ ಕರ್ನಾಟಕದ 4 ಬಿಜೆಪಿ ಶಾಸಕರ ಜೊತೆ ಉದ್ಯಮಿಗಳ ಮಾತುಕತೆ ನಡೆಸುವ ಸಾಧ್ಯತೆಯಿದೆ.  ಅವರೇನಾದರೂ ಒಪ್ಪಿಗೆ ನೀಡಿದರೆ ಜೆಡಿಎಸ್​ನ ಸಚಿವರೊಬ್ಬರು ಆ ರೆಸಾರ್ಟ್​ಗೆ ಹೋಗಿ ಮಾತುಕತೆ ಅಂತಿಮಗೊಳಿಸಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.

error: Content is protected !! Not allowed copy content from janadhvani.com