janadhvani

Kannada Online News Paper

ಎಸ್ಪಿ, ಬಿಎಸ್ಪಿ ಮಹಾ ಮೈತ್ರಿ -ಸ್ವಾಗತಿಸಿದ ಮಮತಾ ಬ್ಯಾನರ್ಜೀ

ಲಕ್ನೋ (ಜ.12): 25 ವರ್ಷಗಳ ಬಳಿಕ ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಮಹಾಮೈತ್ರಿಗೆ ಇಂದು ಅಧಿಕೃತ ಮುದ್ರೆ ಒತ್ತಿವೆ. ಕಾಂಗ್ರೆಸ್​ ಒಳಗೊಂಡಂತೆ ಇತರೆ ಪ್ರಾದೇಶಿಕ ಪ್ರಮುಖ ಪಕ್ಷಗಳು ಬಿಜೆಪಿ ವಿರುದ್ಧ ಮಹಾಘಟ್​ಬಂಧನ್ ರಚಿಸಿಕೊಂಡು, ಚುನಾವಣೆಗೆ ಅಣಿಯಾಗುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಬದಿಗಿರಿಸಿ ಬಿಎಸ್​ಪಿ ಮತ್ತು ಎಸ್​ಪಿ ಮಹಾಮೈತ್ರಿ ಮಾಡಿಕೊಂಡಿವೆ.

ಈ ಸಂಬಂಧ ಇಂದು ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಸ್​ಪಿ ನಾಯಕಿ ಮಾಯಾವತಿ ಮತ್ತು ಎಸ್​ಪಿ ನಾಯಕ ಅಖಿಲೇಶ್ ಯಾದವ್​ ಮಹಾಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, “1993ರಲ್ಲಿ ಕಾನ್ಶಿರಾಮ್-ಮುಲಾಯಂ ನೇತೃತ್ವದಲ್ಲಿ ಆಡಳಿತ ನಡೆಸುವ ಮೂಲಕ ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಈ  ಮೈತ್ರಿಯಿಂದಾಗಿ  ಬಿಜೆಪಿಯಂಥ ಜಾತಿವಾದಿ ಪಕ್ಷ ಸೋಲು ಕಂಡಿತು. ಮತ್ತೊಮ್ಮೆ ಈಗ ನಾವು ಒಟ್ಟಾಗಿದ್ದೇವೆ,” ಎಂದು ಗುಡುಗಿದ್ದಾರೆ.

ಜನರ ಹಿತದೃಷ್ಟಿಯಿಂದ ನಾವು  ಮೈತ್ರಿ ಮಾಡಿಕೊಂಡಿದ್ದೇವೆ. ಹಳೆಯದನ್ನೆಲ್ಲ ಮರೆತು ನಾವು ಒಂದಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜತೆಗೆ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು.

ಸ್ವಾಗತಿಸಿದ ಮಮತಾ ಬ್ಯಾನರ್ಜೀ:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ನೀಡುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ನಿರ್ಧಾರವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಸ್ವಾಗತಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜೀ ಮುಂಬರುವ ಲೋಕಸಭೆ ಚುನಾವಣೆಗಾಗಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಟವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುವುದನ್ನು ಮಮತಾ ತೀವ್ರಗೊಳಿಸಿದ್ದಾರೆ.

error: Content is protected !! Not allowed copy content from janadhvani.com