ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಕಸರತ್ತು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಆಪ್ತ ಬಳಗದ ನಾಯಕರು ಮೈತ್ರಿ ಸರ್ಕಾರದಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿಪಡಿಸಲು ತೆರೆಮರೆಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.
ನಿರೀಕ್ಷಿತ ಮಟ್ಟಕ್ಕೆ ಕಾಂಗ್ರೆಸ್‌ನಲ್ಲಿನ ಭಿನ್ನಮತ ಸ್ಫೋಟಗೊಳ್ಳದ ಕಾರಣ ತಮ್ಮ ಪ್ರಯತ್ನವನ್ನು ಕೈಬಿಟ್ಟಿದ್ದ ಬಿಜೆಪಿ ನಾಯಕರು, ಸದ್ದಿಲ್ಲದೆ ಮೈತ್ರಿ ಸರ್ಕಾರವನ್ನು ಉರುಳಿಸಲು ತೆರೆ-ಮರೆಯ ಪ್ರಯತ್ನವನ್ನು ಈಗಲೂ ಮುಂದುವರೆಸಿದ್ದಾರೆ ಎಂಬುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ನಿನ್ನೆ ದಿಢೀರನೆ ದೆಹಲಿಗೆ ಭೇಟಿ ನೀಡಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಹಿಂದಿರುಗುವುದು ತಾಜಾ ನಿದರ್ಶನವಾಗಿದೆ.
ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ನಡುವಿನ ಭೇಟಿಯಿಂದಾಗಿ ಬಿಜೆಪಿ ನಾಯಕರು ಸುಮ್ಮನೆ ಕುಳಿತಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲೊಬ್ಬರಾದ ರಮೇಶ್ ಜಾರಕಿಹೊಳಿ ಅವರು ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದ ಸಂದರ್ಭದಲ್ಲೇ ಜಾರಕಿಹೊಳಿ ಮತ್ತು ಅವರ ಬೆಂಬಲಿಗರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದರು.
ಆದರೆ, ಅವರು ಎಣಿಸಿದ್ದ ರೀತಿಯಲ್ಲಿ ರಾಜ್ಯರಾಜಕೀಯದಲ್ಲಿ ವಿದ್ಯಮಾನಗಳು ನಡೆಯಲಿಲ್ಲ. ಆದರೂ ತಮ್ಮದೇ ಸರ್ಕಾರವನ್ನು ರಚಿಸಲು ಅಗತ್ಯವಿರುವ `ಮ್ಯಾಜಿಕ್ ನಂಬರ್’ ಕಲೆ ಹಾಕಲು ಯಡಿಯೂರಪ್ಪ ಮತ್ತು ಅವರ ಆಪ್ತ ಸಮೂಹ ಪ್ರಯತ್ನಗಳನ್ನು ಮುಂದುವರೆಸಿದ್ದು, ಸಂಕ್ರಾಂತಿ ಹಬ್ಬ ಅಥವಾ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಯುವುದರೊಳಗೆ ಮೈತ್ರಿ ಸರ್ಕಾರದ ಪತನಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ಮತ್ತು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸುವ ಪ್ರಯತ್ನ ಬಿರುಸಿನಿಂದ ಸಾಗಿದೆ.
ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮತ್ತು ಆರ್. ಶಂಕರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿರುವುದು ಸುಳ್ಳೇನಲ್ಲ. ಅಲ್ಲದೆ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಾದ ನಾಗೇಂದ್ರ, ಬಿ.ಸಿ ಪಾಟೀಲ್ ಮುಂತಾದವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಲು ಸಮಯ ಕಾಯುತ್ತಿದ್ದಾರೆ.
ಸಚಿವ ಸ್ಥಾನ ಸಿಗದಿರುವ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರು ತೀವ್ರ ಅಸಮಾಧಾನಗೊಂಡಿದ್ದು, ಈ ಎಲ್ಲ ಬೆಳವಣಿಗೆಗಳ ಲಾಭ ಪಡೆಯಲು ಬಿಜೆಪಿ ನಾಯಕರು ಸದ್ದಿಲ್ಲದೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಅವರ ಲೆಕ್ಕಾಚಾರದಂತೆ ಎಲ್ಲವೂ ನಡೆದಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಮುನ್ನವೇ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Leave a Reply

Your email address will not be published. Required fields are marked *

error: Content is protected !!