janadhvani

Kannada Online News Paper

ವಿಷಪೂರಿತ ಪ್ರಸಾದ ದುರಂತ: ಕ್ರಿಮಿನಾಶಕ ಮಿಶ್ರಣ-ಎಫ್‍ಎಸ್‍ಎಲ್

ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತಕ್ಕೆ ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಪ್ರಸಾದದಲ್ಲಿ ಬೆರೆಸಿದ್ದ ವಿಷ ಯಾವುದು ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಮೂಲಕ ತಿಳಿದು ಬಂದಿದೆ.

ಭಕ್ತರು ಸೇವಿಸಿದ್ದ ವಿಷ ಪ್ರಸಾದದಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮೊದಲಿಗೆ ನೀರಿನಲ್ಲಿ ಕ್ರಿಮಿನಾಶಕವನ್ನು ಮಿಶ್ರಣ ಮಾಡಿಕೊಂಡು ಬಳಿಕ ಪ್ರಸಾದಕ್ಕೆ ಬೆರೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಖಚಿತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಐಜಿಪಿ ಶರತ್ ಚಂದ್ರ ಅವರು, ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎನ್ನುವ ವರದಿ ಬಂದಿದೆ. ಇದನ್ನು ಕೀಟನಾಶಕ್ಕೆ ಬಳಸುತ್ತಾರೆ. ಗಿಡಕ್ಕೆ ಹುಳು ಮತ್ತು ರೋಗ ಬಂದಾಗ ಈ ಕೀಟನಾಶವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.ಈ ಕುರಿತು ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ. ಶೀಘ್ರವಾಗಿಯೇ ತನಿಖೆ ನಡೆಯುತ್ತಿದೆ ಎಂದು ಶರತ್ ಚಂದ್ರ ಅವರು ಹೇಳಿದ್ದಾರೆ.

ಘಟನೆ:ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಗೋಪುರದ ಶಂಕುಸ್ಥಾಪನೆ ನಡೆದಿತ್ತು. ಈ ಕಾರ್ಯಕ್ರಮದ ನಿಮಿತ್ತ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಸ್ಥಳೀಯರೊಬ್ಬರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಈವರೆಗೂ 14 ಮಂದಿ ಮೃತಪಟ್ಟಿದ್ದಾರೆ.

error: Content is protected !! Not allowed copy content from janadhvani.com