ಅಗ್ರಹಾರ ಎಸ್ಎಸ್ಎಫ್ ವತಿಯಿಂದ ಆಧ್ಯಾತ್ಮಿಕ “ಮಜ್ಲಿಸ್” ಹಾಗೂ ಸದಸ್ಯತನ ಅಭಿಯಾನ

ಅಗ್ರಹಾರ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF), ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡ “ಯೌವ್ವನ ಮರೆಯಾಗುವ ಮುನ್ನ” ಎಂಬ ಜಾಗೃತಿ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕಿನ ಅಗ್ರಹಾರ ‘ಮಸ್ಜಿದ್ ದಾರುಲ್ ಅಮಾನತ್’ ನಲ್ಲಿ ಸಂದೇಶ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಕಾವಲ್ಕಟ್ಟೆ ಅಲ್ ಖಾದಿಸಾ ಶಿಕ್ಷಣ ಪ್ರಾಧಿಕಾರದ ಮುಖ್ಯಸ್ಥ ಡಾ: ಮೌಲಾನಾ ಮುಹಮ್ಮದ್ ಫಾಝಿಲ್ ರಝ್ವಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಬೌದ್ಧಿಕವಾಗಿ ನಮ್ಮ ಸಮಾಜದ ಯುವ ಜನಾಂಗ ಎಷ್ಟರಮಟ್ಟಿಗೆ ಉನ್ನತಿಗೇರುತ್ತಿದ್ದಾರೋ ಅದೇ ಭರದಲ್ಲಿ ಅವರಲ್ಲಿ ನೈತಿಕ ಮೌಲ್ಯಗಳ ಅಧಪತನವಾಗುತ್ತಿದೆ. ಇಂದು ನಮ್ಮ ಸಮಾಜದಲ್ಲಿ ಬಡತನವಾಗಲೀ ಹಸಿವಾಗಲೀ ಬಹಳ ಕಡಿಮೆ ಪ್ರಮಾಣದಲ್ಲಿದೆ. ಅದೇ ರೀತಿ ಸಮಾಜದ ಕೆಳ ಸ್ಥರದಲ್ಲಿರುವ ಕುಟುಂಬಗಳ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಲು ಸಾಕಷ್ಟು ಸಂಸ್ಥೆಗಳು ನಮ್ಮ ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಯಾಚರಿಸುತ್ತಿವೆ. ಆದರೂ ನಮ್ಮ ಜನಾಂಗದ ಯುವ ಪೀಳಿಗೆಯ ವರ್ಗವೊಂದು ನಿರಂತರವಾಗಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವದನ್ನು ನಾವು ಗಮನಿಸುತ್ತಿದ್ದೇವೆ. ಯುವ ಪೀಳಿಗೆ ದುಷ್ಚಟಗಳಿಗೆ ಬಲಿ ಬಿದ್ದರೆ ಆ ಮೂಲಕ ಅವರ ಕುಟುಂಬ, ಪರಿಸರ, ಸಮಾಜ ಹಾಗೂ ಇಡೀ ದೇಶವೇ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಸಮಾಜದ ಹೊಸ ತಲೆಮಾರನ್ನು ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳ ಚೌಕಟ್ಟಿನಡಿಯಲ್ಲಿ ತರಲು ಪ್ರಯತ್ನಿಸುತ್ತಿರುವ ಎಸ್ಎಸ್ಎಫ್ ನ ಕಾರ್ಯವೈಖರಿ ಅತ್ಯಂತ ಶ್ಲಾಘನೀಯ. ಸಮಾಜ ಬಾಂಧವರು ತಮ್ಮ ಮಕ್ಕಳನ್ನು ಇಂಥ ಸಂಘಟನೆಗಳಿಗೆ ಸೇರಿಸುವುದರ ಮೂಲಕ ಅವರಲ್ಲಿ ಬದುಕಿನ ನೈಜ ಮೌಲ್ಯಗಳನ್ನು ಬೆಳೆಸಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷ , ಸುನ್ನಿ ಬರಹಗಾರ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದಲ್ಲಿ ಜಾಗೃತಿ ಭಾಷಣ ಮಾಡಿದರು. ಎಸ್ಎಸ್ಎಫ್ ಹಾಗೂ ಎಸ್.ವೈ.ಎಸ್ ಅಗ್ರಹಾರ ಯುನಿಟ್ ಸಮಿತಿಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ” ಮಹ್ಲರತುಲ್ ಬದ್ರಿಯ್ಯ” ಆಧ್ಯಾತ್ಮಿಕ ಮಜ್ಲಿಸ್ ಮತ್ತು ಎಸ್ಎಸ್ಎಫ್ ನ ಸದಸ್ಯತನ ಅಭಿಯಾನ ಕೂಡಾ ನಡೆಯಿತು.

ಈ ವೇಳೆ ಬಡ ಕುಟುಂಬದ ವ್ಯಕ್ತಿಯೋರ್ವರಿಗೆ ಮನೆ ನಿರ್ಮಿಸುವ ಸಲುವಾಗಿ ಕಾರ್ಯಕರ್ತರಿಂದ ಸಂಗ್ರಹಿಸಿದ ಧನಸಹಾಯವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!