5ವರ್ಷದ ಬಾಲಕಿ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ-ಕಾಮುಕ ಅರ್ಚಕರ ಬಂಧನ

ಭೋಪಾಲ್, ಅ.4 :-ಇಬ್ಬರು ಕಾಮುಕ ಅರ್ಚಕರು ದೇವಾಲಯವೊಂದರಲ್ಲಿ  ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಹೀನ ದುರಾಚಾರ ನಡೆದಿದೆ.ನಾಗರಿಕ ಸಮಾಜ ತಲೆ ತಗ್ಗಿಸುವಂಥ ಈ ನೀಚ ಕೃತ್ಯವು ಮಧ್ಯಪ್ರದೇಶದ ದಟಿಯಾ ಜಿಲ್ಲೆಯಲ್ಲಿ ನಡೆದಿದೆ.

ಈ ದುಷ್ಕೃತ್ಯ ನಡೆಸಿದ ರಾಜು ಪಂಡಿತ್(55) ಹಾಗೂ ಬಟೊಲಿ ಪ್ರಜಾಪತಿ(45) ಎಂಬ ಅರ್ಚಕರನ್ನು ಗೋರಾಘಾಟ್ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಕಾಮುಕರು ಇತರ ಅಪ್ರಾಪ್ತರನ್ನೂ ಸಹ ತಮ್ಮ ಕಾಮತೃಷೆಗೆ ಬಳಸಿಕೊಂಡಿರುವ ಸಾಧ್ಯತೆ ಇದ್ದು ತನಿಖೆ ಮುಂದುವರಿದಿದೆ.

ರೈತನ ಮಗಳಿಗೆ ಸಿಹಿ ತಿಂಡಿ ನೀಡುವ ಆಸೆ ತೋರಿಸಿ ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದ ಇಬ್ಬರು ಅರ್ಚಕರು ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಕಾಮುಕ ಅರ್ಚಕರು ಆಕೆಯನ್ನು ಮನೆ ಬಳಿ ಬಿಟ್ಟು ತೆರಳಿದರು.

ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯದ ಕೃತ್ಯ ನಡೆದಿರುವುದು ತಿಳಿಯಿತು. ಬಳಿಕ ಪೋಷಕರು ನೀಡಿದ ದೂರಿನ ಮೇರೆಗೆ ರಾಜು ಮತ್ತು ಬಟೋಲಿ ಅವರನ್ನು ಬಂಧಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‍ಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

12 ವರ್ಷಗಳ ಕೆಳ ವಯೋಮಾನದ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು 2017ರ ಡಿಸೆಂಬರ್‍ನಲ್ಲೇ ಪ್ರಥಮ ಬಾರಿಗೆ ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗಿದೆ.
2018ರಲ್ಲಿ ಮಧ್ಯಪ್ರದೇಶದ ಇಂದೋರ್‍ನ ರಾಜವಾಡದಲ್ಲಿ ನಾಲ್ಕು ತಿಂಗಳ ಮಗುವನ್ನು ಯುವಕನೊಬ್ಬ(ಹಸುಳೆಯ ಸಂಬಂಧಿ) ಅಪಹರಿಸಿ ಕಟ್ಟಡವೊಂದರಲ್ಲಿ ಅತ್ಯಾಚಾರ ಎಸಗಿ ಕೊಂದು ಹಾಕಿದ್ದ. ಈ ಬರ್ಬರ ಕೃತ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

One thought on “5ವರ್ಷದ ಬಾಲಕಿ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ-ಕಾಮುಕ ಅರ್ಚಕರ ಬಂಧನ

Leave a Reply

Your email address will not be published. Required fields are marked *

error: Content is protected !!