ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 2.50 ರೂ.ಇಳಿಕೆ

ನವದೆಹಲಿ.ಅ.04: ಕೊನೆಗೂ ಜನಸಾಮಾನ್ಯರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ ತೈಲ ದರಗಳನ್ನು 2.50 ರೂ. ಕಡಿತಗೊಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಲೀಟರೊಂದಕ್ಕೆ 2.5 ರೂ. ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಘೋಷಿಸಿದ್ದಾರೆ. ಈ ಮೂಲಕ ಸತತ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಮೋದಿ ಸರ್ಕಾರವು ಸ್ವಲ್ಪ ರಿಲೀಫ್ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕ ಒಂದೂವರೆ ರುಪಾಯಿ ಕಡಿತ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 1 ರುಪಾಯಿ ದರ ಇಳಿಕೆ ಮಾಡುವುದರಿಂದ ಒಟ್ಟಾರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 2.50 ರುಪಾಯಿ ಕಡಿತಗೊಳ್ಳಲಿದೆ ಎಂದರು.  ಸೆಪ್ಟೆಂಬರ್ ತಿಂಗಳ ಮೊದಲಿನಿಂದ ನಾಲ್ಕು ಪ್ರತಿ ಲೀಟರ್ ನಂತೆ ಬೆಲೆ ಏರಿಕೆಯಾಗಿದೆ. ಸದ್ಯ ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದು, ಬೆಲೆ ಇಳಿಸಿದೆ.

ರಾಜ್ಯ ಸರ್ಕಾರಗಳು ಅಬಕಾರಿ ಸುಂಕವನ್ನು 1.50 ರೂ. ಕಡಿಮೆ ಮಾಡಿದರೆ ಒಟ್ಟು 4 ರೂ. ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರಗಳೂ ಕೈಜೋಡಿಸಬೇಕು. ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ. ನಮ್ಮ ಕೆಲವು ಪ್ರಸ್ತಾಪಗಳಿಗೆ ಪ್ರಧಾನಿ ಮೋದಿ ಸಮ್ಮತಿ ನೀಡಿದ್ದಾರೆ’ ಎಂದರು. ಕಚ್ಚಾ ತೈಲ ದರ ದಿನೇ ದಿನೇ ಹೆಚ್ಚಳವಾಗುತ್ತಿದೆ. ಜಗತ್ತಿನ ಎಲ್ಲ ಮಾರುಕಟ್ಟೆಗಳ ಮೇಲೆ ತೈಲದರ ಹೆಚ್ಚಳ ಪರಿಣಾಮ ಬೀರುತ್ತಿದೆ. ಈ ಎಲ್ಲ ಬೆಳವಣಿಗೆ ಕುರಿತು ಇಲಾಖೆಯಲ್ಲಿ ಚರ್ಚೆ ನಡೆಸಲಾಗಿದೆ. ಹಣಕಾಸು ಮತ್ತು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ. ಆಮದು ನಿಯಂತ್ರಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಹಣದುಬ್ಬರ ಹೆಚ್ಚಳವಾಗದಂತೆ ಕ್ರಮಕೈಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

# ಪ್ರಮುಖ ನಗರಗಳಲ್ಲಿ ಇಂದಿನ ಇಂಧನ ಬೆಲೆ:
ಬೆಂಗಳೂರು : ಪೆಟ್ರೋಲ್ 84.67, ಡೀಸೆಲ್ 75.84
ನವದೆಹಲಿ : ಪೆಟ್ರೋಲ್ 84, ಡೀಸೆಲ್ 75.45
ಹೈದರಾಬಾದ್ : ಪೆಟ್ರೋಲ್ 89.06, ಡೀಸೆಲ್ -82.07
ಕೋಲ್ಕತ್ತಾ: ಪೆಟ್ರೋಲ್ 85.80, ಡೀಸೆಲ್ 77.30
ಮುಂಬೈ :ಪೆಟ್ರೋಲ್ 91.34, ಡೀಸೆಲ್ 80.10
ಚೆನ್ನೈ : ಪೆಟ್ರೋಲ್ 87.33, ಡೀಸೆಲ್ 79.79

Leave a Reply

Your email address will not be published. Required fields are marked *

error: Content is protected !!