janadhvani

Kannada Online News Paper

ಸಾಮಾಜಿಕ ಜಾಲ ತಾಣಕ್ಕೆ ನಿರ್ಬಂಧ- ದೂರಸಂಪರ್ಕ ವಲಯದ ಅಭಿಪ್ರಾಯ ಕೋರಿದ ಕೇಂದ್ರ ಸರಕಾರ

ನವದೆಹಲಿ: ರಾಷ್ಟ್ರೀಯ ಹಿತಾಸಕ್ತಿ ಮತ್ತು ಸುವ್ಯಸ್ಥೆಗೆ ತೊಂದರೆಯಾದಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮತ್ತಿತರ ಮೊಬೈಲ್‌ ಆ್ಯಪ್‌ಗಳನ್ನು ಬ್ಲಾಕ್‌ ಮಾಡಲು ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ದೂರಸಂಪರ್ಕ ವಲಯದ ಅಭಿಪ್ರಾಯ ಕೋರಿದೆ.

ಈ ಕುರಿತು ದೂರಸಂಪರ್ಕ ಇಲಾಖೆ ಜುಲೈ 18ರಂದು ಎಲ್ಲ ದೂರಸಂಪರ್ಕ ಆಪರೆಟರ್‌ಗಳಿಗೆ, ಭಾರತೀಯ ಅಂತರ್ಜಾಲ ಸೇವಾ ಪೂರೈಕೆದಾರರ ಸಂಘಟನೆ (ಐಎಸ್‌ಪಿಎಐ), ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್‌ ಇಂಡಿಯಾ (ಸಿಒಎಐ) ಮತ್ತು ಇತರ ತಜ್ಞರಿಗೆ ಪತ್ರ ಬರೆದಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆ್ಯಕ್ಟ್) ಸೆಕ್ಷನ್ 69ಎ ಅನ್ವಯ ಮೊಬೈಲ್ ಆ್ಯಪ್‌ಗಳನ್ನು ಬ್ಲಾಕ್ ಮಾಡುವ ಬಗ್ಗೆ ಪತ್ರದಲ್ಲಿ ಅಭಿಪ್ರಾಯ ಕೇಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಐಟಿ ಆ್ಯಕ್ಟ್ ಸೆಕ್ಷನ್ 69ಎ ಏನು ಹೇಳುತ್ತೆ?

ಯಾವುದೇ ಮಾಹಿತಿಯನ್ನು ಕಂಪ್ಯೂಟರ್‌ನಂತಹ ಮೂಲಗಳಲ್ಲಿ ಸಾರ್ವಜನಿಕರಿಗೆ ದೊರೆಯದಂತೆ ಬ್ಲಾಕ್ ಮಾಡುವಂತೆ ನಿರ್ದೇಶಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅನ್ವಯ ಅವಕಾಶವಿದೆ.

ದೇಶದ ಪರಮಾಧಿಕಾರ, ರಕ್ಷಣಾ ಕ್ಷೇತ್ರ, ಭದ್ರತೆ, ವಿದೇಶಗಳೊಂದಿಗಿನ ಸ್ನೇಹ, ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂತಹ ಮಾಹಿತಿಯನ್ನು ಅಂತರ್ಜಾಲದಲ್ಲಿ ಬ್ಲಾಕ್‌ ಮಾಡುವ ಅಧಿಕಾರವನ್ನು ಈ ಕಾನೂನು ಕೇಂದ್ರ ಸರ್ಕಾರಕ್ಕೆ ನೀಡಿದೆ.

ವಾಟ್ಸ್‌ಆ್ಯಪ್ ಬಗ್ಗೆ ಸರ್ಕಾರ ಅಸಮಾಧಾನ

ಸರ್ಕಾರದ ಪ್ರಮುಖ ಬೇಡಿಕೆಯಾದ, ಸಂದೇಶಗಳ ಸತ್ಯಾಸತ್ಯತೆ ಪತ್ತೆಹಚ್ಚುವಿಕೆ ವಿಚಾರದಲ್ಲಿ ವಾಟ್ಸ್‌ಆ್ಯಪ್ ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವಾಗ ಸರ್ಕಾರದ ನಿರ್ದೇಶನ ಪಾಲನೆಯಾಗುತ್ತಿಲ್ಲವೋ ಆವಾಗ ದುರ್ಬಳಕೆಯೂ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ಎಚ್ಚರಿಕೆ ನೀಡಿದ್ದ ಸರ್ಕಾರ

ಗುಂಪು ಹಲ್ಲೆಗಳಿಗೆ ಕಾರಣವಾಗುವಂಥ ಸುಳ್ಳು ಸುದ್ದಿಗಳನ್ನು ತಡೆಯಲು ವಾಟ್ಸ್‌ಆ್ಯಪ್‌ ಕೈಗೊಳ್ಳುತ್ತಿರುವ ಕ್ರಮ ಸಾಲದು ಎಂದು ಕಳೆದ ತಿಂಗಳು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ವಾಟ್ಸ್‌ಆ್ಯಪ್ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಪ್ರಚೋದನಾಕಾರಿ ಸಂದೇಶಗಳ ಮೂಲವನ್ನು ಪತ್ತೆ ಮಾಡಬೇಕು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಎಚ್ಚರಿಕೆಯನ್ನೂ ನೀಡಿತ್ತು.

‘ಸುಳ್ಳು ಸುದ್ದಿ ಪತ್ತೆಗೆ ಸ್ಥಳೀಯ ತಂಡ’

ಸುಳ್ಳು ಸುದ್ದಿ ಹರಡುವಿಕೆ ತಡೆಗೆ ತನ್ನ ಭಾರತ ಘಟಕದ ಮುಖ್ಯಸ್ಥರನ್ನೂ ಒಳಗೊಂಡ ಸ್ಥಳೀಯ ತಂಡವೊಂದನ್ನು ರಚಿಸುವುದಾಗಿ ವಾಟ್ಸ್‌ಆ್ಯಪ್‌ ಇತ್ತೀಚೆಗೆ ಸರ್ಕಾರಕ್ಕೆ ತಿಳಿಸಿತ್ತು.

ಗುಂಪುಹಲ್ಲೆಗೆ ಕಾರಣವಾಗುತ್ತಿರುವ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ವದಂತಿಗಳಿಂದಾಗಿ ಗುಂಪುಗೂಡಿ ಸಾಯಹೊಡೆದ ಹಲವು ಪ್ರಕರಣಗಳು ಇತ್ತೀಚೆಗೆ ದೇಶದ ವಿವಿಧೆಡೆ ವರದಿಯಾಗಿವೆ. ಸುಳ್ಳುಸುದ್ದಿ ಹಬ್ಬಲು ವಾಟ್ಸ್‌ಆ್ಯಪ್ ಪ್ರಮುಖ ಮಾಧ್ಯಮವಾಗಿ ಬಳಕೆಯಾಗುತ್ತಿದೆ ಎಂಬ ಆರೋಪವಿದೆ.

ಕೃಪೆ:ಪ್ರಜಾವಾಣಿ

error: Content is protected !! Not allowed copy content from janadhvani.com