janadhvani

Kannada Online News Paper

10 ನಿಮಿಷದಲ್ಲೇ ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ

ಬೆಂಗಳೂರು: ರೇಷನ್ ಕಾರ್ಡ್ ಮಾಡುವ ಸಲುವಾಗಿ ಕಚೇರಿಗಳಿಗೆ ಅಲೆದಾಡುತ್ತಾ ಕೆಲವು ಅಧಿಕಾರಿಗಳ ಲಂಚದ ಆಸೆಗೆ ರೋಸಿ ಹೋಗಿರುವ ಜನರಿಗೆ ಸರ್ಕಾರ
ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೇಷನ್ ಕಾರ್ಡ್ ಮಾಡಲು ಕಚೇರಿಯಿಂದ ಮನೆಗೆ ಅಲೆಯಬೇಕಾಗಿಲ್ಲ. ಆನ್ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು
ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ನಿಮ್ಮ ಪಡಿತರ ಚೀಟಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಕೇವಲ ಹತ್ತು ನಿಮಿಷದಲ್ಲಿ ಪಡಿತರ ಚೀಟಿ ಪಡೆಯಬಹುದಾಗಿದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಮೊದಲನೇಯದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ಸೈಟ್ https://ahara.kar.nic.in/home.aspx ಪುಟ ತೆರೆಯಬೇಕು. ಇಲ್ಲಿ ಕಾಣುವ ಇ-ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಅನೇಕ ಆಯ್ಕೆಗಳು ಕಾಣಲಿವೆ ಆದರೆ ನಿಮಗೆ ಬೇಕಾಗಿರುವ ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ. ನಂತರ ಕಾಣುವ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿದರೆ ಕನ್ನಡ, ಇಂಗ್ಲೀಷ ಎರಡು ಭಾಷೆಗಳನ್ನು ಕಾಣುತ್ತವೆ. ಇಲ್ಲಿ ನಿಮಗೆ ಬೇಕಾಗುವ ಭಾಷೆಯನ್ನು ಆಯ್ಕೆ ಮಾಡಿ. ಕನ್ನಡ ಭಾಷೆ ಆಯ್ಕೆ ಮಾಡಿರುವವರು ಮುಂದಿನ ಹಂತದಲ್ಲಿ ಕಾಣುವ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ. ನಂತರ ಮುಂದೆ ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳು ನಿಮಗೆ ಕಾಣಲಿವೆ. ಇದರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಅವುಗಳ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೀಡಬೇಕು. ನಂತರ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನೋಂದಾಯಿಸಿ. ಇಲ್ಲವೇ ಕೈಬೆರಳಿನ ಜೀವಮಾಪನ ನೀಡಿ. ಓಟಿಪಿಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ನಮೂದಿಸಿ ಮುನ್ನಡೆಯಿರಿ. ನಂತರ ಆಧಾರ್ ಇಲಾಖೆಯಿಂದ ದತ್ತಾಂಶ ಪಡೆದುಕೊಳ್ಳಲಾಗುತ್ತದೆ. ಅಲ್ಲಿ ನಿಮ್ಮ ಹೆಸರು, ವಿವರ ಕಾಣುತ್ತದೆ. ಅದರ ಪಕ್ಕದಲ್ಲಿ ‘ಸೇರಿಸಿ’ ಎಂಬ ಆಯ್ಕೆ ಇರುತ್ತದೆ. ಇದರೊಂದಿಗೆ ನಿಮ್ಮ ಕುಟುಂಬದವರ ಮಾಹಿತಿಯನ್ನು ಸೇರಿಸಬಹುದು. ನಂತರದಲ್ಲಿ ಗ್ರಾಮೀಣ ವಾಸಿಗಳೇ ಇಲ್ಲವೇ ನಗರದಲ್ಲಿ ವಾಸಿಸುವವರೆ ಎಂಬ ಮಾಹಿತಿ ಒದಗಿಸಬೇಕಾಗುತ್ತದೆ. ಅಲ್ಲಿ ಕಾಣುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿರಿ. ಈ ಎಲ್ಲಾ ಮಾಹಿತಿಗಳನ್ನು ಯಶಸ್ವಿಯಾಗಿ ತುಂಬಿದ ನಂತರ ರೇಷನ್ ಕಾರ್ಡ್ ಮುಂದಿನ ಹಂತದಲ್ಲಿ ನಿಮಗೆ ಕಾಣುತ್ತದೆ. ಆಗ ಪ್ರಿಂಟ್ ತೆಗೆದುಕೊಳ್ಳಬಹುದು. ಕೇವಲ ಹತ್ತರಿಂದ ಹದಿನೈದು ನಿಮಿಷಗಳ ಒಳಗೆ ನಿಮ್ಮ ಕೈಯಲ್ಲಿ ಪಡಿತರ ಚಿಟಿ ಇರುತ್ತದೆ. ಹೀಗೆ ಅತ್ಯಂತ ಸುಲಭ ವಿಧಾನದಲ್ಲಿ ನೀವು ರೇಷನ್ ಕಾರ್ಡ್ ಪಡೆಯಬಹುದು.

error: Content is protected !! Not allowed copy content from janadhvani.com