janadhvani

Kannada Online News Paper

ವಕ್ಫ್ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯ

ಬೆಂಗಳೂರು,ಜು.19- ರಾಜ್ಯಾದ್ಯಂತ ಭೂ ಕಬಳಿಕೆ ಮಾಡಿರುವ ಕೋಟ್ಯಂತರ ರೂ. ಬೆಲೆ ಬಾಳುವ ವಕ್ಫ್ ಆಸ್ತಿ ಕಬಳಿಕೆ ಸಂಬಂಧ ಅನ್ವರ್ ಮಾನಿಪ್ಪಾಡಿ ವರದಿಯನ್ನು ಅನುಷ್ಠಾನಗೊಳಿಸಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಇದ್ದಲ್ಲಿ ರಾಜ್ಯದಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಇಂದು ಪಕ್ಷದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ , ಪರಿಷತ್ ಸದಸ್ಯ ಎಸ್.ರವಿಕುಮಾರ್ ಹಾಗೂ ಅಲ್ಪಸಂಖ್ಯಾತ ಮುಖಂಡ ಅನ್ವರ್ ಮಾನಪ್ಪಾಡಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೂರಾರು ಕೋಟಿ ಬೆಲೆ ಬಾಳುವ ವಕ್ಫ್ ಆಸ್ತಿಯನ್ನುಅನೇಕ ಮುಖಂಡರು ಭೂ ಕಬಳಿಕೆ ಮಾಡಿದ್ದಾರೆ. ರಾಜ್ಯಾದ್ಯಂತ ಅನ್ವರ್ ಮಾನಪ್ಪಾಡಿ ಪ್ರವಾಸ ನಡೆಸಿ ಸಮಗ್ರದಾಖಲೆಗಳನ್ನು ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡಿದ್ದರೂ ಇದನ್ನು ಅನುಷ್ಠಾನ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಇತ್ತೀಚೆಗೆ ಮುಕ್ತಾಯಗೊಂಡ ಅಧಿವೇಶನದಲ್ಲಿ ಅಲ್ಪಸಂಖ್ಯಾತ ಸಚಿವ ಜಮೀರ್ ಅಹಮ್ಮದ್ ಸದನದಲ್ಲೇ ಉತ್ತರಿಸುವಾಗ ಪ್ರಕರಣವನ್ನು ಸಿಬಿಐಗೆ ವಹಿಸಲು ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದರು. ಬಳಿಕ ನ್ಯಾಯಾಲಯದ ಕುಂಟು ನೆಪ ಹೇಳಿ ತಮ್ಮ ಮಾತನ್ನು ಹಿಂಪಡೆದಿದ್ದಾರೆ. ಹಾಗಾಗಿ ಇದು ಹಕ್ಕುಚ್ಯುತಿಯ ಉಲ್ಲಂಘನೆಯಾಗುತ್ತದೆ. ಸರ್ಕಾರದ ವಿರುದ್ದ ನಾವು ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವರದಿಯಲ್ಲಿ ಸತ್ಯವಿದ್ದರೆ ನನ್ನ ತಂದೆಯಾದರೂ ಕ್ಷಮಿಸಲ್ಲ.ನೀವು ಇದನ್ನು ಸಿಬಿಐಗೆ ಕೊಡಲಿಲ್ಲ ಆದರೆ ನಾನು ಕೊಡುತ್ತೇನೆ ಎಂದು ಸದನದಲ್ಲಿ ಹೇಳಿದ್ದರು. ಸಚಿವರ ಭರವಸೆ ಹಿನ್ನಲೆ ಚರ್ಚೆ ಅಲ್ಲಿಗೆ ಮುಗಿದು ಸದನದಲ್ಲಿ ಸಭಾಪತಿಗಳು ಚರ್ಚೆ ಮುಕ್ತಾಯವಾಗಿತ್ತು ಎಂದಿದ್ದರು. ಸರ್ಕಾರದ ಉತ್ತರವನ್ನು ನಾವು ಸ್ವಾಗತಿಸಿದ್ದೆವು ಆದರೆ ಸರ್ಕಾರ ಸದನದಲ್ಲಿ ಸಿಬಿಐಗೆ ಕೊಡುವುದಾಗಿ ಹೇಳಿ ಈಗ ನುಣುಚಿಕೊಳ್ಳುತ್ತಿದೆ.

ತಕ್ಷಣ ಇದನ್ನು ಸಿಬಿಐಗೆ ಕೊಡಬೇಕು,ಇದು ಬಹುದೊಡ್ಡ ರಾಜಕೀಯ ಸಮಸ್ಯೆ ಇರಬಹುದು, ರಾಜಕೀಯ ತಲ್ಲಣವಾಗಬಹುದು ಎಂದು ಎಚ್ಚರಿಕೆ ನೀಡಿದರು.ಹಿರಿಯರ ತಲೆ ಉರುಳಲಿದೆ ಎನ್ನುವ ಭೀತಿ ಕಾಂಗ್ರೆಸ್ಗೆ ಇರಬಹುದು ಆದರೆ ಜೆಡಿಎಸ್ ಗೆ ಇಲ್ಲವಲ್ಲಾ.15 ದಿನದಲ್ಲಿ ವರದಿ ಹಾಗು ಹಗರಣದ ತನಿಖೆಯನ್ನು ಸಿಬಿಐಗೆ ಕೊಡಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ, ಹಗರಣವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ.ಕುಮಾರಸ್ವಾಮಿ ಬುಡಕ್ಕೂ ಇದು ಬರಬಹುದು ಅವರ ತಲೆ ದಂಡ ಆದರೆ ಅದಕ್ಕೆ ಅವರೇ ಹೊಣೆ ಎಂದು ಗುಡುಗಿದರು.

ಸದನದ ಬಳಿಕ ಖಾದರ್ ಹೋಗಿ ಏನೋ ಬುದ್ದಿ ಹೇಳಿದ್ದಾರೆ ಅದಕ್ಕೆ ಜಮೀರ್ ಈಗ ನಿಲುವು ಬದಲಿಸಿಕೊಂಡಿದ್ದಾರೆ. ಮಾನಿಪ್ಪಾಡಿ ವರದಿ ಯಥಾ ವತ್ತಾಗಿ ಮಂಡಿಸಿ ಎಂದಾಗ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಹಾಗಾಗಿ ನಾವು ಹೋರಾಟದ ಹಾದಿ ಹಿಡಿಯುತ್ತೇವೆ.ಅಗತ್ಯ ಬಿದ್ದರೆ ಕಾನೂನು ಹೋರಾಟವೂ ನಡೆಸುತ್ತೇವೆ ಎಂದರು. ಅನ್ವರ್ ಮಾನಪ್ಪಾಡಿ ಮಾತನಾಡಿ, 2012 ಮಾರ್ಚ್ 26 ರಂದು ಏಳು ಸಾವಿರ ಪುಟದ ವರದಿ ನೀಡಿದ್ದೆ, ಆಗಿನ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿ ಅದೇ ರೀತಿ ಸಂಪುಟದಲ್ಲು ಚರ್ಚಿಸಿ ಸದನದಲ್ಲಿ ಮಂಡನೆಗೆ ತೀರ್ಮಾನ ಮಾಡಿತ್ತು.
2013 ರಲ್ಲಿ ಸಂಪುಟದಲ್ಲಿಅನುಮೋದಿಸಿ ಕೆಲ ಉತ್ತಮ ವಿಧೇಯಕಗಳನ್ನು ತರಲಾಗಿತ್ತು.ಯಾವ ಆಸ್ತಿಯಲ್ಲಿ ಕಬಳಿಕೆ ಆಗಿದೆಯೋ ಆ ಆಸ್ತಿ ವಾಪಸ್ ತಂದುಕೊಡಲು ಎರಡು ಸಮಿತಿ ರಚನೆ ಮಾಡಲಾಗಿತ್ತು. ರಾಜ್ಯ ಸಮಿತಿ , ಜಿಲ್ಲಾ ಸಮಿತಿ ರಚಿಸಿ ಯಾರೂ ಕೂಡ ಕೋರ್ಟ್ಗೆ ಹೋಗುವಂತಿಲ್ಲ, ಸಮಿತಿ ಮುಂದೆ ಬರಬೇಕು ಎಂದು ವಿಧೇಯಕ ರಚಿಸಿತ್ತು. ವೈದ್ಯಕೀಯ ಕಾಲೇಜು,ಇಂಜಿನಿಯರಿಂಗ್ ಕಾಲೇಜು, ಪಂಚತಾರಾ ಹೋಟೆಲ್, ಶಿಕ್ಷಣ ಸಂಸ್ಥೆಗಳು ಸೇರಿ ಇತರ ಕಡೆ ಅದ ಕಬಳಿಕೆ ವಾಪಾಸ್ ತರುವ ಮಹತ್ವದ ವಿಧೇಯಕ ತಂದಿದ್ದೆವು.ಆದರೆ ನನ್ನ ಅವಧಿ ಮುಗಿದ ನಂತರ ವಿಧೇಯಕ ತಂದರು ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಕೂಡ ವರದಿ ಮಂಡಿಸಲು ಹೇಳಿತ್ತು.
ಅಂದಿನ ಸಭಾಪತಿ ಶಂಕರಮೂರ್ತಿ ಕೂಡ ತನ್ನ ಆದೇಶ ಅನುಷ್ಠಾನ ಆಗದಾಗ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.ವರದಿಯ ಸಂಪೂರ್ಣ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಒಪ್ಪಿಸಿದ್ದರು. ಉಪ ಲೋಕಾಯುಕ್ತರು ತನಿಖೆ ನಡೆಸಿ ಸರ್ಕಾರಕ್ಕೆಒಪ್ಪಿಸಿತ್ತು.ಅದರೂ ಕೂಡ ವರದಿ ಇನ್ನೂ ಮಂಡನೆಯಾಗಿಲ್ಲ, ಅದೂ ಮಂಡನೆಯಾಗಬೇಕು2.30 ಲಕ್ಷ ಕೋಟಿ ಮೌಲ್ಯದ ಭೂ ಕಬಳಿಕೆ ಆಗಿದೆ.ಯಾವ ರೀತಿ ಕಬಳಿಕೆ ಆಗಿದೆ ಎಂದು ವರದಿ ನೀಡಿದ್ದೆ ಅದು ಜಾರಿಯಾಗಬೇಕು ಅದಕ್ಕಾಗಿ ಬಿಜೆಪಿ ಎಲ್ಲಾ ರೀತಿಯ ಹೋರಾಟ ನಡೆಸಲಿದೆ ಎಂದರು.

error: Content is protected !! Not allowed copy content from janadhvani.com