ನವದೆಹಲಿ: ಮತಾಂತರದ ಕುರಿತಾದ ಲವ್ ಜಿಹಾದ್ ಆರೋಪವನ್ನು ಉತ್ತರ ಪ್ರದೇಶದ ಆಯುಷ್ ಮಲಿಕ್ ತಳ್ಳಿಹಾಕಿದ್ದಾರೆ. ಶಾಮ್ಲಿಯ ಕೋಟ್ಯಾಧಿಪತಿ ಉದ್ಯಮಿಯ ಮಗ ಆಯುಷ್ ಮಲಿಕ್. ನಾನು ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ ಮತ್ತು ಈಗ ಮುಹಮ್ಮದ್ ಅಲಿ ಎಂಬ ಹೆಸರನ್ನು ಬಳಸುತ್ತಿದ್ದೇನೆ ಎಂದು ಆಯುಷ್ ಹೇಳಿದ್ದಾರೆ.
ಆಯುಷ್ ಮಲಿಕ್ ಈದ್ ನಮಾಜ್ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿವಾದಗಳು ಪ್ರಾರಂಭವಾದವು. ಇದರ ಬೆನ್ನಲ್ಲೇ ಶಾಮ್ಲಿಯ ಪ್ರಸಿದ್ಧ ವೈದ್ಯಕೀಯ ಅಂಗಡಿಯ ಮಾಲೀಕ ಹಾಗೂ ಆಯುಷ್ ತಂದೆ ದೇವರಾಜ್ ಮಲಿಕ್ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗನನ್ನು ಪ್ರೇಮದ ಜಾಲಕ್ಕೆ (ಲವ್ ಟ್ರ್ಯಾಪ್) ಸಿಲುಕಿಸಲಾಗಿದೆ ಮತ್ತು ಆಸ್ತಿಯನ್ನು ಗುರಿಯಾಗಿಸಿಕೊಂಡು ದೊಡ್ಡ ಪಿತೂರಿಯ ಭಾಗವಾಗಿ ಮತಾಂತರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ರಾಜ್ಯದ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆಯುಷ್ ಪತ್ನಿ ಚಾಂದ್ನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಂಧನಗಳಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಆದರೆ, ತಮ್ಮನ್ನು ಬಲವಂತವಾಗಿ ಅಥವಾ ಬ್ರೈನ್‌ವಾಶ್ ಮಾಡಿ ಮತಾಂತರ ಮಾಡಲಾಗಿದೆ ಎಂಬ ಆರೋಪಗಳನ್ನು ಆಯುಷ್ ಮಲಿಕ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಬಾಲ್ಯದಿಂದಲೂ ತಮಗೆ ಇಸ್ಲಾಂ ಧರ್ಮದ ಬಗ್ಗೆ ಆಸಕ್ತಿ ಇತ್ತು ಮತ್ತು ವರ್ಷಗಳ ಕಾಲ ಆನ್‌ಲೈನ್ ಉಪನ್ಯಾಸಗಳು ಹಾಗೂ ಧರ್ಮಗ್ರಂಥಗಳ ಮೂಲಕ ಇಸ್ಲಾಂ ಬಗ್ಗೆ ಅಧ್ಯಯನ ಮಾಡಿದ್ದೇನೆ ಎಂದು ಆಯುಷ್ ಹೇಳಿದ್ದಾರೆ. ಮತಾಂತರಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ವೈಯಕ್ತಿಕ ಮತ್ತು ಸ್ವಯಂಪ್ರೇರಿತವಾಗಿತ್ತು ಎಂದು ಆಯುಷ್ ಸ್ಪಷ್ಟಪಡಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ಚಾಂದ್ನಿ ಖುರೇಷಿ ಅವರನ್ನು ವಿವಾಹವಾದ ಸಮಯದಲ್ಲಿ ತಾವು ಅಧಿಕೃತವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಗಿ ಮಲಿಕ್ ಹೇಳಿದ್ದಾರೆ. ಕೌಟುಂಬಿಕ ಆಸ್ತಿಗೂ ಈ ಮತಾಂತರಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಮ್ಮ ವೈಯಕ್ತಿಕ ಕೌಟುಂಬಿಕ ಸಮಸ್ಯೆಯಾಗಿದೆ. ಕೌಟುಂಬಿಕ ಆಸ್ತಿಯಲ್ಲಿ ತನಗಿರುವ ಎಲ್ಲಾ ಹಕ್ಕುಗಳನ್ನು ತಾಯಿ ಮತ್ತು ಸಹೋದರಿಯರಿಗೆ ಬಿಟ್ಟುಕೊಡಲು ತಾವು ಸಿದ್ಧರಿದ್ದೇವೆ ಎಂದು ಆಯುಷ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಮಗನ ಮತಾಂತರದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ ಎಂಬ ನಿಲುವಿಗೆ ತಂದೆ ದೇವರಾಜ್ ಮಲಿಕ್ ದೃಢವಾಗಿ ಬದ್ಧರಾಗಿದ್ದಾರೆ. ಅವರ ಪ್ರೇಮ ಸಂಬಂಧದ ಬಗ್ಗೆ ತಮಗೆ ತಿಳಿದಿತ್ತು ಎಂಬುದನ್ನು ಒಪ್ಪಿಕೊಂಡರೂ, ಚಾಂದ್ನಿ ಖುರೇಷಿಯ ಕುಟುಂಬಸ್ಥರು ಮತ್ತು ಕೆಲವು ಧಾರ್ಮಿಕ ಮುಖಂಡರು ವರ್ಷಗಳಿಂದ ಆಯುಷ್ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಆಯುಷ್ ಮಲಿಕ್ ಅವರೊಂದಿಗೆ ಆಜ್ ತಕ್ ಚಾನೆಲ್ ಪ್ರತಿನಿಧಿ ನಡೆಸಿದ ಸಂದರ್ಶನ:
- ಪ್ರಶ್ನೆ: ಇದೆಲ್ಲದರ ಆರಂಭ ಹೇಗಾಯಿತು? ಇದರಲ್ಲಿ ಯೂಟ್ಯೂಬ್‌ನ ಪಾತ್ರವೇನು?
- ಉತ್ತರ: ಒಮ್ಮೆ ನನಗೆ ರಕ್ತದೊತ್ತಡ (ಬಿಪಿ) ಹೆಚ್ಚಾಗಿ ಕೈಗಳು ನಡುಗಲು ಪ್ರಾರಂಭಿಸಿದವು. ಆಗ ಯೂಟ್ಯೂಬ್‌ನಲ್ಲಿ ಪವಿತ್ರ ಕುರಾನ್‌ನ ‘ಸೂರತ್ ಅಲ್-ಇಖ್ಲಾಸ್’ ಪಠಿಸಲು ಹೇಳುವ ವೀಡಿಯೊವೊಂದನ್ನು ನೋಡಿದೆ. ನಾನು ಅದನ್ನು ಪಠಿಸಿದಾಗ ನನ್ನ ಭಯ ದೂರವಾಯಿತು ಮತ್ತು ಕೈಗಳ ನಡುಕ ನಿಂತಿತು. ಯೂಟ್ಯೂಬ್‌ನ ಆಲ್ಗಾರಿದಮ್ ಮೂಲಕ ಇಂತಹ ವಿಷಯಗಳು ನನ್ನ ಮುಂದೆ ಬರುತ್ತಲೇ ಇದ್ದವು, ಅಲ್ಲಿಂದ…
- ಪ್ರಶ್ನೆ: ನೀವು ಚಾಂದ್ನಿ ಅವರೊಂದಿಗೆ ಹೇಗೆ ಸಂಪರ್ಕಕ್ಕೆ ಬಂದಿರಿ?
- ಉತ್ತರ: ಅವರು ಫಿಜಿಯೋಥೆರಪಿಸ್ಟ್ ಆಗಿದ್ದರು, ನನಗೆ ಹೆಗಲಿಗೆ ಗಾಯವಾಗಿತ್ತು. ನಾನು ಆಗೊಮ್ಮೆ ಈಗೊಮ್ಮೆ ಅವರ ಕ್ಲಿನಿಕ್ ಗೆ ಹೋಗುತ್ತಿದ್ದೆ, ಹಾಗೆ ನಮಗೆ ಪರಿಚಯವಾಯಿತು ಮತ್ತು ಅವರು ಮುಸ್ಲಿಂ ಎಂದು ತಿಳಿಯಿತು. ನಾಲ್ಕು ವರ್ಷಗಳ ಹಿಂದೆ ನಮ್ಮ ನಿಖಾ (ಮದುವೆ) ನಡೆದಿದೆ.
- ಪ್ರಶ್ನೆ: ದೆಹಲಿಯ ಯಾವುದಾದರೂ ಮೌಲವಿ ನಿಮ್ಮ ಮತಾಂತರವನ್ನು ಮಾಡಿಸಿದ್ದಾರೆಯೇ?
- ಉತ್ತರ: ಮತಾಂತರ ಎನ್ನುವುದು ಹೊರಗಿನಿಂದ ಬರುವಂತದ್ದಲ್ಲ, ಅದು ಒಳಗಿನಿಂದ ತಾನಾಗಿಯೇ ಸಂಭವಿಸುವಂತದ್ದು. ಅದರಲ್ಲಿ ನಿಖಾ ಮಾಡಿಸಿಕೊಟ್ಟ ಮೌಲವಿಯ ಯಾವುದೇ ಪಾತ್ರವಿಲ್ಲ. ವಿಷಯಗಳನ್ನು ಸ್ವತಃ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮನುಷ್ಯನಿಗೆ ಇರಬೇಕು. ನಾನು ಪ್ರಪಂಚದಾದ್ಯಂತದ ಮೌಲವಿಗಳ ಮಾತುಗಳನ್ನು ಕೇಳುತ್ತಿದ್ದೆ,ನಾನು ಪ್ರವಾದಿಯವರ ಜೀವನ ಮತ್ತು ಇಸ್ಲಾಂ ಧರ್ಮಕ್ಕೆ ಆಕರ್ಷಿತನಾಗಿದ್ದೇನೆ.
- ಪ್ರಶ್ನೆ: ಚಾಂದ್ನಿ ಅವರ ಸಹೋದರ ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೇ? ನಿಮ್ಮ ಕೋಟ್ಯಂತರ ಆಸ್ತಿಯನ್ನು ಗುರಿಯಾಗಿಸಿಕೊಂಡು ಇವೆಲ್ಲವನ್ನೂ ಮಾಡಲಾಗುತ್ತಿದೆಯೇ?
- ಉತ್ತರ: ನಮ್ಮ ಬಳಿ ಮೊದಲು ಮತ್ತು ಈಗಲೂ ಅನೇಕ ಮುಸ್ಲಿಮರು ಕೆಲಸ ಮಾಡುತ್ತಿದ್ದಾರೆ, ಆದರೆ ಚಾಂದ್ನಿ ಅವರ ಸಹೋದರ ಎಂದಿಗೂ ಬಂದಿಲ್ಲ. ಆಸ್ತಿಯ ವಿಷಯವನ್ನು ಪ್ರಸ್ತಾಪಿಸಿ ನೀವು ನನ್ನನ್ನು ಗುರಿಯಾಗಿಸುತ್ತಿದ್ದೀರಿ, ನನಗೆ ಈಗ ಯಾವುದೇ ಆಸ್ತಿಯ ಅಗತ್ಯವಿಲ್ಲ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ