janadhvani

Kannada Online News Paper

ಮತ ಹಾಕಲು ಮಾತ್ರ ಸೀಮಿತಗೊಂಡರೇ ಮುಸ್ಲಿಮರು..?!

ರಾಜ್ಯದ ಮುಸ್ಲಿಮರ ಸ್ಥಿತಿಗತಿಗಳು ಹೀನಾಯ ಮಟ್ಟದಲ್ಲಿದೆ ಅನ್ನುವ ಸಾಚಾರ್ ಸಮಿತಿಯ ವರದಿಗಳು ಹೇಳಿ ವರ್ಷಗಳು ಹಲವು ಕಳೆದು ಹೋದರೂ ಇಂದಿಗೂ ಅನುಷ್ಠಾನಕ್ಕೆ ಬರದೆ ಧೂಳು ಹಿಡಿಯುತ್ತಿರುವಾಗ ಮುಸ್ಲಿಮರ ಪ್ರಸಕ್ತವಾದ ಪರಿಸ್ಥಿತಿಗಳ ದುರ್ಲಾಭ ಪಡೆಯುತ್ತಾ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಬದುಕನ್ನು ಹಸನುಗೊಳಿಸುವ ಪ್ರಯತ್ನ ನಡೆಸದೆ ಕೇಲವ ಮತ ಬೇಟೆಗೆ ಮಾತ್ರ ಮುಸ್ಲಿಮರನ್ನು ಬಳಕೆ ಮಾಡುತ್ತಿರುವ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಹರಕೆಯ ಕುರಿಗಳನ್ನಾಗಿಸುತ್ತಿರುವುದು ಗೊತ್ತಿದ್ದೂ ಗೊತ್ತಿಲ್ಲದಂತೆ, ಕೆಲವೊಮ್ಮೆ ಪರ್ಯಾಯ ಆಯ್ಕೆಗಳಿಲ್ಲದೆ ಮೌನವಾಗುತ್ತಾ ಬಂದ ಪರಿಣಾಮ ಬಹುತೇಕ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳು ಇಂದಿಗೂ ಕೊಳಚೆ ಪ್ರದೇಶಗಳಾಗಿಯೇ ಉಳಿದಿದೆ ಅನ್ನುವುದು ಒಪ್ಪಲೇಬೇಕಾದ ವಾಸ್ತವವಾಗಿದೆ.

ಜನಸಂಖ್ಯೆಯ ಅನುಸಾರವಾಗಿ ಮುಸ್ಲಿಮರಿಗೆ ಸೂಕ್ತವಾದ ಪ್ರಾತಿನಿಧ್ಯವನ್ನು ನೀಡದೆ ಇದುವರೆಗೂ ಬಹುಪಾಲು ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರವನ್ನು ಅನುಭವಿಸುತ್ತಾ ಬಂದಿರುವ ಪಕ್ಷಗಳು ಅನ್ಯಾಯವನ್ನು ಮಾಡುತ್ತಾ ಬಂದಿದ್ದರೂ ಅದನ್ನು ಒಂದೇ ವೇದಿಕೆಯಲ್ಲಿ ನಿಂತು ಒಗ್ಗಟ್ಟಾಗಿ ಪ್ರಶ್ನಿಸುವ ಮನೋಭಾವ ಮುಸ್ಲಿಂ ಸಮುದಾಯ ಬೆಳೆಸದೇ ಇರುವುದರಿಂದ ಮುಸ್ಲಿಂ ಸಮುದಾಯದೊಳಗಿನ ಸಂಘಟನಾ ಭಿನ್ನತೆ, ಒಣ ಪ್ರತಿಷ್ಠೆಯ ದುರ್ಲಾಭ ಪಡೆದ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಸಮಯ ಸಂದರ್ಭಕ್ಕನುಸಾರವಾಗಿ ತುಳಿಯುತ್ತಾ ಬಂದಿದೆ.

ಚುನಾಯಿತಗೊಂಡ ಮುಸ್ಲಿಂ ಶಾಸಕರಾದರೆ ಸಮುದಾಯದ ಸಮಸ್ಯೆಗಳನ್ನು ಧೈರ್ಯವಾಗಿ ಪ್ರಶ್ನಿಸಿ ನ್ಯಾಯ ಒದಗಿಸಿಕೊಡುವ ಮನಸ್ಸು ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ಮುಸ್ಲಿಂ ಸಮಯದಾಯಕ್ಕೆ ಕೊಳಚೆ ಪ್ರದೇಶಗಳಿಂದಾದರೂ ಮುಕ್ತಿ ಸಿಗಬಹುದಿತ್ತೇನೋ.?!
ಮುಸ್ಲಿಂ ಸಮುದಾಯದ ಹತ್ತು ಮಂದಿ ಶಾಸಕರಾದರೆ ಅವರಿಗೆ ಒಂದೋ, ಎರಡೋ ಸಚಿವ ಸ್ಥಾನವನ್ನು ನೀಡಿ ನಾವು ನೀಡಿದ ಭಿಕ್ಷೆ ಅನ್ನುವ ರೂಪದಲ್ಲಿ ಅವರನ್ನು ಮೌನವಾಗಿಸುವ ಪಕ್ಷದ ನಾಯಕರು ನಂತರ ಆ ಎರಡು ಸಚಿವರ ನಡುವೆ ಪರಸ್ಪರ ಆರೋಪ – ಪ್ರತ್ಯಾರೋಪಗಳನ್ನು ನಡೆಸುವಂತಾಗಿಸಿ ಅವರ ನಡುವೆ ಭಿನ್ನತೆ ಸೃಷ್ಟಿಸುವಂತೆ ಮಾಡುವ ಪ್ರಯತ್ನಗಳನ್ನು ಇಲ್ಲಿ ನಡೆಸಲಾಗುತ್ತದೆ.
ಮುಸ್ಲಿಂ ಸಮುದಾಯದ ಸಚಿವರು ಸಹ ಮಹತ್ತರ ಸಾಧನೆಗಳ ಮೂಲಕ ಜನಮನ್ನಣೆ ಗಳಿಸಿದಂತಹ ಹಲವಾರು ಉದಾಹರಣೆಗಳು ಇರುವಾಗ ಕೇವಲ ಒಂದೋ, ಎರಡೋ ಮಂದಿಗೆ ಸಚಿವ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಅನ್ನುವ ಚಿಂತನೆಯನ್ನು ನಡೆಸುವ ಪ್ರಯತ್ನವನ್ನೂ ನಾವು ಮಾಡುತ್ತಿಲ್ಲ.
ಇನ್ನು ಮುಸ್ಲಿಂ ಸಮುದಾಯದ ಸಚಿವರನ್ನೇ ತೀರಾ ವೈಯಕ್ತಿಕವಾಗಿ ನಿಂದಿಸುವ ಪ್ರಯತ್ನಗಳು ಇಲ್ಲಿ ಕೆಲವರು ಮಾಡುತ್ತಿದ್ದಾರೆ. ಸಚಿವರು ಕೆಲಸ ಮಾಡದಿದ್ದಲ್ಲಿ ಅವರನ್ನು ಪ್ರಶ್ನಿಸುವುದು, ವಿಮರ್ಷಿಸುವುದು ಮಾಡಬೇಕಾದದ್ದೇ ಆದರೆ ನಾವು ಮತ್ತೂ ಮುಂದುವರಿದು ಅವರನ್ನು ವೈಯಕ್ತಿಕವಾಗಿ ನಿಂದಿಸುವುದು ಮಾತ್ರ ನಾವು ಮಾಡುವ ದೊಡ್ಡ ತಪ್ಪಾಗಿರುತ್ತದೆ.

ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಕ್ಷಣವನ್ನು ಪಡೆಯಲು ಸರ್ಕಾರ ಹಲವು ಸವಲತ್ತುಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅದನ್ನು ಸಮರ್ಪಕವಾಗಿ ಇಲ್ಲಿ ತಲುಪಿಸುವ ವ್ಯವಸ್ಥೆಗಳು ಇಲ್ಲವಾಗಿದೆ. ಸರ್ಕಾರೀ ಮಟ್ಟದಲ್ಲಿ ಅಂತಹ ವ್ಯವಸ್ಥೆಗಳನ್ನು ಮಾಡುವ ಕುರಿತು ಮನವಿ ನೀಡುವ ವಿಷಯದಲ್ಲಿ ನಮ್ಮ ನಿರ್ಲಕ್ಷ್ಯತೆಗಳ ಕುರಿತು ನಾವಾಗಿ ಚಿಂತಿಸಬೇಕಾದ ಅನಿವಾರ್ಯತೆಯಿದೆ.
ನಮ್ಮ ಜಿಲ್ಲೆಯಲ್ಲೇ ಪ್ರತಿಯೊಂದು ಊರಿನಲ್ಲೂ ಜಾತಿಗೊಂದು ಐಷಾರಾಮಿ ಸಭಾಭವನ ಇದ್ದರೂ ಮುಸ್ಲಿಂ ಸಮುದಾಯಕ್ಕೆ ಅಂತಹ ಒಂದು ಭವನವನ್ನು ನಿರ್ಮಿಸಿಕೊಡಲು ಇಲ್ಲಿನ ರಾಜಕೀಯ ನಾಯಕರು ಇದುವರೆಗೂ ಪರಿಶ್ರಮಿಸಿಲ್ಲ ಅನ್ನುವುದು ಮುಸ್ಲಿಂ ಸಮುದಾಯವನ್ನು ರಾಜಕೀಯ ಹರಕೆಯ ಕುರಿಗಳಾಗಿ ಬಳಸಿಕೊಳ್ಳುವುದಕ್ಕೆ ನಿದರ್ಶನವಾಗಿದೆ.

ಇಂದು ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸುವುದರ ಕುರಿತು ಚರ್ಚೆಯಾಗುತ್ತಿದೆ. ಬಹಳ ಆಸಕ್ತಿಯಿಂದ ಅದನ್ನು ಆಚರಿಸಲಾಗುತ್ತದೆ. ಆದರೆ ಹಲವಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಆಗ್ರಹಿಸುತ್ತಾ ಬಂದಿರುವ ಮುಸ್ಲಿಂ ವಿಶ್ವ ವಿದ್ಯಾಲಯದ ಕನಸನ್ನು ನನಸಾಗಿಸಲು ಇದುವರೆಗೂ ಸಾಧ್ಯವಾಗಿಲ್ಲ.
ಟಿಪ್ಪು ಜಯಂತಿ, ಶಾದಿ ಭಾಗ್ಯ ಇಂತಹ ಕೆಲವೊಂದು ವಿಚಾರಗಳ ಮೂಲಕ ಸದಾ ಚರ್ಚೆಯಲ್ಲಿರುವ ವಿಷಯಗಳನ್ನು ಮುಂದಿರಿಸಿಕೊಂಡು ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸಲು ನೋಡುವ ರಾಜಕೀಯ ಪಕ್ಷಗಳು ಮುಸ್ಲಿಮರ ಅಭ್ಯದಯಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲೇ ಇಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮ ಈ ಸಲದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ವನ್ನು ನೀಡದೇ ಅನ್ಯಾಯ ಮಾಡಿದರೂ ಅದರ ಕುರಿತು ಮಾತನಾಡುವ ಯಾವುದೇ ನಾಯಕರನ್ನು ನಾವಿನ್ನೂ ಸೃಷ್ಟಿಸಲಿಲ್ಲ ಅನ್ನುವುದು ಮಾತ್ರ ಚಿಂತಿಸಲೇಬೇಕಾದ ವಿಷಯ.
ಸಮುದಾಯದ ನೋವು, ಸಮುದಾಯಕ್ಕಾಗುವ ಅನ್ಯಾಯವನ್ನು ನ್ಯಾಯಯುತವಾಗಿ ಕೇಳುವ ಕನಿಷ್ಠ ಪಕ್ಷ ಇಪ್ಪತ್ತು ಶಾಸಕರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಡಲು ಸಮುದಾಯ ತನ್ನೊಳಗಿನ ಒಣ ಪ್ರತಿಷ್ಠೆ, ಸಂಘಟನಾ ಭಿನ್ನತೆ ಮರೆತು ತಯಾರಾಗುತ್ತೋ ಅದುವರೆಗೂ ರಾಜಕೀಯ ಪಕ್ಷದ ಹರಕೆಯ ಕುರಿಗಳಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ.

ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com