janadhvani

Kannada Online News Paper

ಈದುಲ್ ಫಿತರ್ ಹಬ್ಬವು ಸಾಹೋದರ್ಯತೆಯ ಪ್ರತೀಕವಾಗಿರಲಿ

ಮಲಿನಗೊಂಡ ಸಮಾಜ,ಮನುಷ್ಯತ್ವ ಕಳೆದುಕೊಂಡ ಜನತೆಗೆ ಶಾಂತಿ,ಸಾಹೋದರ್ಯತೆ,ಮಾನವೀಯತೆಯ ಪ್ರತೀಕವಾಗಿ ಪ್ರತಿಯೊಂದು ಹಬ್ಬಗಳು ರೂಪುಗೊಳ್ಳುವಂತಹ ಸಂದರ್ಭಗಳನ್ನು ಕಾಣಿಸಲು ಸಾಧ್ಯ.

ತಿಂಗಳುಗಳ ಪೈಕಿ ಅತೀ ಶ್ರೇಷ್ಟತೆಯನ್ನು ಹೊಂದಿರುವ ರಂಝಾನ್ ತಿಂಗಳು ಯಾತ್ರೆಯಾಗಿ ಶವ್ವಾಲ್ ತಿಂಗಳ ಚಂದ್ರದರ್ಶನವಾದೊಡನೆ ಪ್ರತಿಯೊಂದು ಮನೆಗಳಲ್ಲೂ ಈದುಲ್ ಫಿತರ್ ಹಬ್ಬದ ಕಲರವ ಪ್ರಾರಂಭವಾಗತೊಡಗುತ್ತದೆ.
ಕೆಡುಕನ್ನು ವಿರೋಧಿಸುವ,ಒಳಿತನ್ನು ಆಹ್ವಾನಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳೆಂದು ಕಲಿಸಿದ ಧರ್ಮದ ಅನುಯಾಯಿಗಳಿಂದು ತಿಂಗಳುಗಳ ಕಾಲ ಸರ್ವಶಕ್ತನ ಆಜ್ಞೆಗನುಸಾರವಾಗಿ ಇಬಾದತ್ ಮೂಲಕ ಜೀವನವನ್ನು ಪಾವನನ್ನಾಗಿಸುವ ಪ್ರಯತ್ನ ಮಾಡಿದ್ದರೂ ಹಬ್ಬದ ಒಂದು ದಿವಸದ ಸಂಭ್ರಮದ ಹೆಸರಿನಲ್ಲಿ ತನ್ನ ಸತ್ಕರ್ಮಗಳನ್ನು ಫಲಪ್ರದವನ್ನಾಗಿಸುವಲ್ಲಿ ವಿಫಲರಾಗುತ್ತಿರುವುದು ದುರದೃಷ್ಟಕರ..!!

ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಜೀವಿಸಬೇಕಾಗಿದ್ದ ಸಮುದಾಯದ ಒಂದು ವರ್ಗವು ಅಧಾರ್ಮಿಕತೆಯಿಂದ ಈದುಲ್ ಫಿತರ್ ಹಬ್ಬವು ನಮಗಿಷ್ಟಬಂದಂತೆ ಸಂಭ್ರಮಿಸಲು ಇರುವ ಪರವಾಣಿಗೆ ಅನ್ನುವಂತೆ ಜೀವಿಸಲು ಪ್ರಾರಂಭಿಸಿರುವುದರಿಂದಲೇ ಕಳೆದ ಕೆಲ ವರ್ಷಗಳಿಂದೀಚೆಗೆ ಹಬ್ಬದ ಸಂಭ್ರಮಗಳಲ್ಲಿ ನಡೆಯುವ ಅನಾಹುತಗಳ ಸಂಖ್ಯೆ ವೃದ್ಧಿಸತೊಡಗಿರುವುದು.

ಶವ್ವಾಲ್ ತಿಂಗಳ ಚಂದ್ರದರ್ಶನ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸಮುದಾಯದ ಕೆಲ ಯುವಕರು ಬೈಕ್ ರ್ರ್ಯಾಲಿ, ಸಿಡಿಮದ್ದು ಸುಡುವುದು ಮುಂತಾದ ನೀಚಗೆಟ್ಟ ವರ್ತನೆಗಳಿಂದ ಈದುಲ್ ಫಿತರ್ ಹಬ್ಬದ ಮಹತ್ವವನ್ನು ಇಲ್ಲವಾಗಿಸುವ ಪ್ರಯತ್ನ ಮಾಡುತ್ತಾ ಬರುತ್ತಿರುವುದು ಖಂಡನೀಯ.

ಈದುಲ್ ಫಿತರ್ ಹಬ್ಬವನ್ನು ಸಂಭ್ರಮ ,ಸಡಗರದಿಂದ ಆಚರಿಸುತ್ತಿರುವಾಗ ಒಂದು ಹೊತ್ತಿನ ತುತ್ತು ಅನ್ನಕ್ಕಾಗಿ ಪರದಾಡುತ್ತಾ, ಜೀವನವನ್ನು ಮುನ್ನಡೆಸುವಂತಾಗಲು ಆಸರೆಗಳಿಲ್ಲದೆ ಹಬ್ಬದ ದಿನವೂ ಹಸಿವಿನಿಂದ ಉಪವಾಸಿಗರಂತೆ ಇರುವ ಸಮುದಾಯದ ಅದೆಷ್ಟೋ ಜೀವಗಳು ಚಡಪಡಿಸುತ್ತಿರುತ್ತದೆ.ಅಂತವರಿಗೆ ಕಾರುಣ್ಯದ ನೋಟವನ್ನು ಬೀರುವಂತಾಗಬೇಕಿದೆ.

ಯಾರದೋ ತಪ್ಪಿಗೆ ಬಲಿಪಶುಗಳಾಗಿ ಸೆರೆಮನೆಯೊಳಗೆ ಯಾತನಾಮಯ ಜೀವನ ನಡೆಸುತ್ತಿರುವ ಸಮುದಾಯದ ಯುವಕರ ಬಿಡುಗಡೆಗಾಗಿಯೂ,ಮುಸ್ಲಿಮರಾಗಿ ಜನಿಸಿದ ಕಾರಣಕ್ಕಾಗಿ ಜಗತ್ತನ್ನು ಕಣ್ಣು ತೆರೆದು ನೋಡಬೇಕಾದ ಮುದ್ದು ಕಂದಮ್ಮಗಳು ಶತ್ರುಗಳ ಗುಂಡಿನೇಟಿಗೆ ಬಲಿಯಾಗುತ್ತಿರುವಂತಹ ಪ್ಯಾಲೆಸ್ತೀನ್,ಸಿರಿಯಾ, ಮುಂತಾದ ಸಮುದಾಯದ ಮಂದಿಯ ರಕ್ಷಣೆಗಾಗಿಯೂ,ಐಸಿಸ್ ಅನ್ನುವ ಸಂಘಟನೆಯ ಮೂಲಕ ಮನುಷ್ಯ ಹತ್ಯೆ ನಡೆಸುವ ನೀಚರ ಅಂತ್ಯಕ್ಕಾಗಿ ಸರ್ವಶಕ್ತನಲ್ಲಿ ಪ್ರಾರ್ಥಿಸಲು ಮರೆಯದಿರೋಣ.

ಈದುಲ್ ಫಿತರ್ ಹಬ್ಬವು ಮೋಜಿನ ದಿನವನ್ನಾಗಿ ಆಚರಿಸದೆ ,ಕುಸಿದು ಬಿದ್ದಿರುವ ಕುಟುಂಬ ಸಂಬಂಧಗಳನ್ನು ವೃದ್ಧಿಸುವಂತಾಗಲೂ,ಸಹೋದರ ಧರ್ಮೀಯರ ನಡುವಿನ ಒಡನಾಟ ಗಟ್ಟಿಗೊಳಿಸುವಂತಾಗಲು ಪ್ರಯತ್ನಿಸಬೇಕಾಗಿದೆ.

ಗೆಳೆಯರ ಜತೆ ಬೈಕ್ ರೇಸ್ ನಡೆಸುತ್ತಾ ತಿರುಗಾಡುವಾಗ ನಮ್ಮ ನಿನ್ನೆಗಳಲ್ಲಿ ನಮ್ಮೊಂದಿಗಿದ್ದ ಅದೆಷ್ಟೋ ಗೆಳೆಯರು ಸರ್ವಶಕ್ತನ ಅನುಲ್ಲಂಘನೀಯವಾದ ವಿಧಿಯ ಕರೆಗೆ ಓಗೊಟ್ಟು ಕಬರಿನೊಳಗಡೆ ಸೇರಿಕೊಂಡಿದ್ದಾರೆ ಅನ್ನುವ ವಾಸ್ತವ ಸತ್ಯವನ್ನು ಮರೆಯದಿರಿ.ಸ್ವೇಚ್ಚಾಚಾರದ ಪರಾಕಾಷ್ಟೆಯಲ್ಲಿ ಮೆರೆಯುವಾಗ ನಮ್ಮ ಬರುವಿಕೆಯನ್ನು ಕಾಯುತ್ತಿರುವ ಮನೆಮಂದಿ ನಮ್ಮದೇ ನಿರೀಕ್ಷೆಯಲ್ಲಿ ಇರುವರು ಅನ್ನುವುದನ್ನು ಮರೆಯದಿರೋಣ.

ಈದುಲ್ ಫಿತರ್ ಹಬ್ಬವು ನಾಡಿನ ಶಾಂತಿ,ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತಾಗಲಿ ಅನ್ನುವ ಮನತುಂಬಿದ ಹಾರೈಕೆಯೊಂದಿಗೆ ಸರ್ವರಿಗೂ ಈದುಲ್ ಫಿತರ್ ಹಬ್ಬದ ಪ್ರೀತಿ ತುಂಬಿದ ಶುಭಾಶಯಗಳು.

ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com