janadhvani

Kannada Online News Paper

ಬೆಂಗಳೂರು, ಜೂ.14- ವಿಧಾನ ಪರಿಷತ್ ಸಭಾಪತಿ ಸ್ಥಾನ ಎಂಟು ವರ್ಷದ ನಂತರ ಬಿಜೆಪಿ ಕೈ ತಪ್ಪುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಆಡಳಿತ ಪಕ್ಷಕ್ಕೆ ಸಭಾಪತಿ ಸ್ಥಾನ ಬಿಟ್ಟು ಕೊಡದ ಬಿಜೆಪಿ ಇದೀಗ ಸಮ್ಮಿಶ್ರ ಸರ್ಕಾರ ರಚನೆಯಾದ ಕಾರಣ ಕೊನೆಗೂ ಸಭಾಪತಿ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ. ಹೌದು, ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಖ್ಯೆಗಿಂತಲೂ ಕಡಿಮೆ ಸಂಖ್ಯೆಗೆ ಬಿಜೆಪಿ ಇಳಿದರೂ ಜೆಡಿಎಸ್ ಸಖ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಸಭಾಪತಿ ಸ್ಥಾನ ಸಿಗದಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈ ಒಡಂಬಡಿಕೆಯಿಂದಾಗಿ ಐದು ವರ್ಷ ಪೂರ್ಣಾವಧಿ ಮುಗಿಸಿದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಭಾಪತಿ ಭಾಗ್ಯ ಸಿಕ್ಕಿರಲಿಲ್ಲ. ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಹಾಗಾಗಿ ಸಹಜವಾಗಿ ವಿಧಾನ ಪರಿಷತ್‍ನಲ್ಲೂ ಜೆಡಿಎಸ್, ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಜೊತೆ ಸೇರಿ ಸಭಾಪತಿ ಸ್ಥಾನ ಪಡೆದುಕೊಳ್ಳಲಿದೆ.ವಿಧಾನ ಪರಿಷತ್‍ನಲ್ಲಿ ಸದ್ಯ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 34, ಬಿಜೆಪಿ 19, ಜೆಡಿಎಸ್ 14, ಪಕ್ಷೇತರ ಇಬ್ಬರು ಸದಸ್ಯರಿದ್ದು, 6 ಸ್ಥಾನ ಖಾಲಿ ಉಳಿದಿವೆ. 75 ಸದಸ್ಯ ಬಲದ ವಿಧಾನ ಪರಿಷತ್ ಸಭಾಪತಿ ಸ್ಥಾನ ಪಡೆಯಲು 38 ಸ್ಥಾನ ಅಗತ್ಯ.

ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇರುವ ಕಾರಣ ಆಡಳಿತ ಪಕ್ಷದ ಬಲ 48 ಆಗಲಿದೆ. ಬಹುಮತಕ್ಕೂ 10 ಸ್ಥಾನ ಹೆಚ್ಚಿದೆ. ಆದರೆ ಪರಿಷತ್ನಲ್ಲಿ 6 ಸ್ಥಾನ ಖಾಲಿ ಇರುವ ಕಾರಣ ಪರಿಷತ್ ಬಲ 69 ಕ್ಕೆ ಕುಸಿದಿದ್ದು, ಬಹುಮತಕ್ಕೆ 35 ಸ್ಥಾನ ಸಾಕು. ಆದರೂ ಪೂರ್ಣ ಪ್ರಮಾಣದ ಬಹುಮತಕ್ಕೂ ಹೆಚ್ಚಿನ ಸ್ಥಾನ ಮೈತ್ರಿಕೂಟಕ್ಕೆ ಲಭ್ಯವಿರುವ ಕಾರಣ ಅನಾಯಾಸವಾಗಿ ಮೈತ್ರಿಕೂಟಕ್ಕೆ ಸಭಾಪತಿ ಸ್ಥಾನ ಖಚಿತವಾಗಿದೆ.

ಸಾರ್ವತ್ರಿಕ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮೇ 17ಕ್ಕೆ ಅನ್ವಯವಾಗುವಂತೆ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ 33, ಬಿಜೆಪಿ 19, ಜೆಡಿಎಸ್ 13, ಪಕ್ಷೇತರ 2 ಸದಸ್ಯರ ಬಲವಿದ್ದು, ಖಾಲಿ 6 ಸ್ಥಾನ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬೈರತಿ ಸುರೇಶ್ ನೀಡಿದ ರಾಜೀನಾಮೆಯಿಂದ ತೆರವಾದ 1 ಸ್ಥಾನ ಸೇರಿ ಒಟ್ಟು 7 ಸ್ಥಾನ ಖಾಲಿ ಉಳಿದಿದ್ದವು.

ವಿಧಾನಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿಧಾನಸಭೆಯಿಂದ ವಿಧಾನ ಪರಿಷತ್ನ 11 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ನಂತರ ಕಾಂಗ್ರೆಸ್ ಪಕ್ಷದ ಬಲದಲ್ಲಿ ಯಾವುದೇ ವ್ಯತ್ಯಾಸವಾಗದೆ. 33 ಸಂಖ್ಯೆ ಹಾಗೆಯೇ ಉಳಿಯಿತು. ಬಿಜೆಪಿ 1 ಸ್ಥಾನ ಹೆಚ್ಚಿಸಿಕೊಂಡು 20ಕ್ಕೆ ತಲುಪಿತು. ಜೆಡಿಎಸ್ ಕೂಡ 1 ಸ್ಥಾನ ಹೆಚ್ಚಿಸಿಕೊಂಡು 14 ಸ್ಥಾನಕ್ಕೆ ತಲುಪಿತು. ಪಕ್ಷೇತರ 2 ಸದಸ್ಯರು ಹಾಗೂ ಖಾಲಿ ಉಳಿದ ಸ್ಥಾನದಲ್ಲಿ ಬೈರತಿ ಬಸವರಾಜ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭರ್ತಿ ಹಿನ್ನೆಲೆ ಖಾಲಿ ಸ್ಥಾನ 7 ರಿಂದ 6ಕ್ಕೆ ಇಳಿಯಿತು.  ಶಿಕ್ಷಕ ಹಾಗೂ ಪದವೀಧರ ಕ್ಷೇತ್ರ ಸೇರಿ 6 ಕ್ಷೇತ್ರಕ್ಕೆ ಚುನಾವಣೆ ನಡೆಯಿತು. ಇದರಲ್ಲಿ ಕಾಂಗ್ರೆಸ್ 1 ಸ್ಥಾನ ಪಡೆದುಕೊಂಡರೆ, ಬಿಜೆಪಿ ಮೂರರಲ್ಲಿ ಗೆದ್ದು 1 ಸ್ಥಾನ ಕಳೆದುಕೊಂಡಿತು. ಜೆಡಿಎಸ್ ಎರಡೂ ಸ್ಥಾನ ಉಳಿಸಿಕೊಂಡಿದೆ.ಪರಿಷತ್ ಕದನದ ನಂತರ ಕಾಂಗ್ರೆಸ್ 34, ಬಿಜೆಪಿ 19, ಜೆಡಿಎಸ್ 14, ಪಕ್ಷೇತರ 2 ಸ್ಥಾನದ ಬಲ ಹೊಂದಿದೆ.

ದೀರ್ಘಾವಧಿ ದಾಖಲೆ ಬರೆದ ಶಂಕರಮೂರ್ತಿ:
ಸಭಾಪತಿಯಾಗಿ ಡಿ.ಹೆಚ್.ಶಂಕರಮೂರ್ತಿ ದೀರ್ಘಾವಧಿ ಸೇವೆಯ ಹೊಸ ದಾಖಲೆ ಬರೆದಿದ್ದಾರೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವೇಳೆ ಸಭಾಪತಿಯಾಗಿ ಆಯ್ಕೆಯಾದ ಶಂಕರಮೂರ್ತಿ ಹೆಚ್ಚು ಕಡಿಮೆ 8 ವರ್ಷ ಹುದ್ದೆ ಅಲಂಕರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 2010 ರ ಜುಲೈ 05 ರಂದು ಸಭಾಪತಿಯಾಗಿ ಆಯ್ಕೆಯಾದ ಡಿ.ಹೆಚ್.ಶಂಕರಮೂರ್ತಿ 2012 ರ ಜೂನ್ 21 ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ನಂತರ ಮತ್ತೆ ಜೂನ್ 28 ಕ್ಕೆ ಸಭಾಪತಿಯಾಗಿ ಮರು ಆಯ್ಕೆಯಾದರು. ಈ 6 ದಿನ ಎಂ.ವಿ.ರಾಜಶೇಖರನ್ ಹಂಗಾಮಿ ಸಭಾಪತಿ ಆಗಿದ್ದು ಬಿಟ್ಟರೆ 2018 ರ ಜೂನ್ ವರೆಗೂ ಶಂಕರಮೂರ್ತಿ ಸಭಾಪತಿ ಸ್ಥಾನ ಅಲಂಕರಿಸಿದ್ದು, ಅತಿಹೆಚ್ಚು ಕಾಲ ಕರ್ತವ್ಯ ನಿರ್ವಹಣೆ ಮಾಡಿದ ಹೊಸ ದಾಖಲೆ ಬರೆದರು.

error: Content is protected !! Not allowed copy content from janadhvani.com