janadhvani

Kannada Online News Paper

ದೆಹಲಿ ಸಿಎಂ ಜೈಲಿನಿಂದ ಬಿಡುಗಡೆ- ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

ದೇಶವನ್ನು ಸರ್ವಾಧಿಕಾರದಿಂದ ಪಾರು ಮಾಡಬೇಕು, ಇದಕ್ಕಾಗಿ ದೇಶದ 140 ಕೋಟಿ ಜನರು ಒಟ್ಟಾಗಿ ಹೋರಾಡಬೇಕು

ನವದೆಹಲಿ | 50 ದಿನಗಳ ಸೆರೆವಾಸದ ನಂತರ ಅರವಿಂದ ಕೇಜ್ರಿವಾಲ್ ಜೈಲಿನಿಂದ ಹೊರಬಂದರು. ತಿಹಾರ್ ಜೈಲಿನ ಗೇಟ್ ನಂ.4ರ ಮೂಲಕ ಅವರನ್ನು ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬಂದ ಕೇಜ್ರವಾಲ್‌ಗೆ ಆಮ್ ಆದ್ಮ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

ಹೊರಬಂದ ನಂತರ ಕೇಜ್ರಿವಾಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಹೇಳಿದಂತೆಯೇ ಹಿಂತಿರುಗಿದ್ದೇನೆ. ದೇಶವನ್ನು ಸರ್ವಾಧಿಕಾರದಿಂದ ಪಾರು ಮಾಡಬೇಕು, ಇದಕ್ಕಾಗಿ ದೇಶದ 140 ಕೋಟಿ ಜನರು ಒಟ್ಟಾಗಿ ಹೋರಾಡಬೇಕು ಎಂದು ದೇಶದ ಜನತೆಗೆ ಅವರು ಕರೆ ನೀಡಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ತಿಹಾರ್ ಜೈಲಿನ ಮುಂದೆ ಕೇಜ್ರವಾಲ್ ಅವರನ್ನು ಬರಮಾಡಿಕೊಂಡರು. ಅಬಕಾರಿ ನೀತಿ ಹಗರಣ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಕೆಲ ಹೊತ್ತಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಹೊರಬಂದರು.

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು ಸುಪ್ರೀಂ ಕೋರ್ಟ್ ಜೂನ್ 1ರ ತನಕ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ.

ಅಂತಿಮ ಹಂತದ ಮತದಾನ ನಡೆಯುವ ತನಕ ಅವರಿಗೆ ಮಧ್ಯಂತರ ಜಾಮೀನು ದೊರಕಿದ್ದು ಜೂನ್ 2ರಂದು ಜೈಲಿಗೆ ವಾಪಸಾಗಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಕೇಜ್ರವಾಲ್ ಅವರನ್ನು ಬಂಧಿಸಿತ್ತು.

ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಅನುವು ಮಾಡಿಕೊಡಲು ಜಾಮೀನು ಒದಗಿಸಬೇಕೆಂಬ ಕೇಜ್ರವಾಲ್ ಅವರ ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇಪಿಸಿತ್ತು.

ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಜಸ್ಟಿಸ್ ದೀಪಾಂಕರ್‌ ದತ್ತಾ ಅವರ ಪೀಠ ಇಂದು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಒಪ್ಪಿದೆ. ಜೂನ್ 2ರಂದು ಶರಣಾಗಬೇಕೆಂದು ನ್ಯಾಯಾಲಯ ಸೂಚಿಸಿದೆ.

error: Content is protected !! Not allowed copy content from janadhvani.com