ಜಿದ್ದಾ: ಹಜ್ ಸಿದ್ಧತೆಯ ಭಾಗವಾಗಿ, ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ನುಸುಕ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ಡ್ ಯಾತ್ರಿಕರ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.
ಸಚಿವಾಲಯವು, ಮೊದಲ ಬ್ಯಾಚ್ ಕಾರ್ಡ್‌ಗಳನ್ನು ಇಂಡೋನೇಷ್ಯಾದ ಯಾತ್ರಿಕರ ನಿಯೋಗಕ್ಕೆ ಹಸ್ತಾಂತರಿಸಿತು. ಯಾತ್ರಾರ್ಥಿಗಳು ಪವಿತ್ರ ಸ್ಥಳಗಳನ್ನು ಪ್ರವೇಶಿಸಲು, ಸಂಚರಿಸಲು ಮತ್ತು ಪ್ರಯಾಣಿಸಲು ಈ ಕಾರ್ಡ್ ಅನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ವೀಸಾ ಮಂಜೂರು ಮಾಡಿದ ನಂತರ ಹಜ್ ಕಚೇರಿಗಳ ಮೂಲಕ ವಿದೇಶಿ ಯಾತ್ರಾರ್ಥಿಗಳಿಗೆ ಕಾರ್ಡ್ ನೀಡಲಾಗುತ್ತದೆ.
ದೇಶೀಯ ಯಾತ್ರಿಕರು ಹಜ್ ‘ಪರವಾನಗಿ’ಯನ್ನು ಪಡೆದ ನಂತರ ಸೇವಾ ಕಂಪನಿಗಳ ಮೂಲಕ ಪಡೆಯಬಹುದು. ಪವಿತ್ರ ಸ್ಥಳಗಳಲ್ಲಿ ಅಧಿಕೃತ ಯಾತ್ರಿಕರನ್ನು ಪ್ರತ್ಯೇಕಿಸುವ ಮುದ್ರಿತ ಅಧಿಕೃತ ಗುರುತಿನ ಚೀಟಿಯಾಗಿದೆ ‘NUSUK ಕಾರ್ಡ್’. ‘ನುಸುಕ್’ ಮತ್ತು ‘ತವಕಲ್ನಾ’ ಆನ್‌ಲೈನ್ ವೇದಿಕೆ ಮೂಲಕ ಇದರ ಡಿಜಿಟಲ್ ಪ್ರತಿ ಲಭ್ಯವಾಗಲಿದೆ.
ಏತನ್ಮಧ್ಯೆ, ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಿಕರಿಗೆ ನುಸುಕ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿರುವುದರಿಂದ, ಪರವಾನಗಿ ಪಡೆಯದೆ ಹಜ್‌ಗೆ ಬರುವವರಿಗೆ ಕುಣಿಕೆ ಬಿಗಿಯಾಗಲಿದೆ. ನುಸುಕ್ ಕಾರ್ಡ್ ಇಲ್ಲದೆ ಪವಿತ್ರ ಸ್ಥಳಗಳಿಗೆ ಪ್ರವೇಶ ಮತ್ತು ಪ್ರಯಾಣ ಅಸಾಧ್ಯ. ಈ ಮೂಲಕ ಹಜ್ ಮತ್ತು ಉಮ್ರಾ ಸಚಿವಾಲಯವು ಹಜ್ ಚಟುವಟಿಕೆಗಳನ್ನು ಹೆಚ್ಚು ವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.