janadhvani

Kannada Online News Paper

ಗುರಿ ಸಾಧಿಸಲಾಗಿದೆ’, ದಾಳಿ ಕೊನೆಗೊಂಡಿದೆ: ಇರಾನ್

ಟೆಹ್ರಾನ್: ಇಸ್ರೇಲ್ ವಿರುದ್ಧ ಮೊದಲ ನೇರ ಸೇನಾ ದಾಳಿಯ ನಂತರ ಇರಾನ್, ದಾಳಿಯನ್ನು ಕೊನೆಗೂಳಿ ಸಿರುವುದಾಗಿ ಘೋಷಿಸಿದೆ. ಇನ್ನು ಮಿಲಿಟರಿ ಪ್ರತಿದಾಳಿ ನಡೆಸಿದರೆ ಘೋರ ಪರಿಣಾಮ ಎದುರಿಸಬೇಕಾದೀತು ಎಂದೂ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.
“ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಅಥವಾ ಅವರ ಬೆಂಬಲಿಗರು ಏನಾದರೂ ನಮ್ಮ ಎಚ್ಚರಿಕೆಗೆ ಮನ್ನಣೆ ನೀಡದಿದ್ದರೆ ಅವರು ನಿರ್ಣಾಯಕ ಮತ್ತು ಬಲವಾದ ಪ್ರತಿಕ್ರಿಯೆಯನ್ನು ಎದುರಿಸಲಿದ್ದಾರೆ ” ಎಂದು ರೈಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ದಾಳಿ ನಡೆಸಿದ ಸೇನೆಯನ್ನು ಶ್ಲಾಘಿಸಿ ಇಸ್ರೇಲ್ ಮೇಲಿನ ದಾಳಿಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು.
‘ಶತ್ರುಗಳಿಗೆ ತಕ್ಕ ಪಾಠ ಕಲಿಸಲಾಗಿದೆ ಮತ್ತು ಇಸ್ರೇಲಿ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಬ್ರಾಹಿಂ ರೈಸಿ ಬಹಿರಂಗಪಡಿಸಿದ್ದಾರೆ.

ದಾಳಿಯು ತನ್ನ ಎಲ್ಲಾ ಉದ್ದೇಶಗಳನ್ನು ಸಾಧಿಸಿದೆ ಮತ್ತು ಕಾರ್ಯಾಚರಣೆಯನ್ನು ಮುಂದುವರಿಸುವ ಉದ್ದೇಶವಿಲ್ಲ ಎಂದು ಇರಾನ್‌ನ ಸೇನಾ ಮುಖ್ಯಸ್ಥ ಮೊಹಮ್ಮದ್ ಬಾಖರಿ ಹೇಳಿದರು.
ಒಂದು ವೇಳೆ ಇಸ್ರೇಲ್ ದಾಳಿ ನಡೆಸಿದರೆ ಇರಾನ್‌ನಿಂದ ದೊಡ್ಡ ಪ್ರತಿಕ್ರಿಯೆ ನೀಡಲಾಗುವುದು ಎಂದು ಬಾಖರಿ ಎಚ್ಚರಿಸಿದರು.
ಇರಾನ್‌ನ ಪ್ರತೀಕಾರವು ಏಪ್ರಿಲ್ 1 ರಂದು ಡಮಾಸ್ಕಸ್ ದೂತಾವಾಸವನ್ನು ಗುರಿಯಾಗಿಸಿದ್ದ ಇಸ್ರೇಲ್ ನ ಎಫ್ 35 ವಿಮಾನ ಗಳು ಹಾರಿದ್ದ ವಾಯುನೆಲೆ ಮತ್ತು “ಗುಪ್ತಚರ ಕೇಂದ್ರ” ವನ್ನು ಗುರಿಯಾಗಿಸಿಕೊಂಡಿತ್ತು ಎಂದು ಅವರು ಬಹಿರಂಗಪಡಿಸಿದರು.

ಎರಡು ಕೇಂದ್ರಗಳನ್ನು ಕೆಡವಿ ದ್ವಂಸ ಮಾಡಲಾಗಿದೆ ಎಂದೂ ಹೇಳಿಕೊಂಡಿದ್ದಾರೆ.
ಆದಾಗ್ಯೂ, ದಾಳಿಯು ಕೇವಲ ಸಣ್ಣ ಹಾನಿಯನ್ನು ಮಾತ್ರ ಉಂಟುಮಾಡಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ.

ಏತನ್ಮಧ್ಯೆ, ಹಲವಾರು ದೇಶಗಳು ಇರಾನ್‌ನ ದಾಳಿಯನ್ನು ಖಂಡಿಸಿದ ನಂತರ, ಟೆಹ್ರಾನ್‌ನ ವಿದೇಶಾಂಗ ಸಚಿವಾಲಯವು ಫ್ರೆಂಚ್, ಬ್ರಿಟಿಷ್ ಮತ್ತು ಜರ್ಮನ್ ರಾಯಭಾರಿಗಳನ್ನು ಕರೆಸಿದೆ.

error: Content is protected !! Not allowed copy content from janadhvani.com