janadhvani

Kannada Online News Paper

ಇರಾನ್ ಪ್ರತೀಕಾರ: ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ- ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಭೀತಿ

ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ 7 ಮಂದಿ ಕಾವಲು ಅಧಿಕಾರಿಗಳು ಮೃತಪಟ್ಟಿದ್ದರು. ಇಸ್ರೇಲ್‌ನ ಅಪರಾಧಗಳಿಗಾಗಿ ಅದಕ್ಕೆ ಶಿಕ್ಷೆ ನೀಡಲಾಗುವುದು ಎಂದು ಇರಾನ್, ಪ್ರತೀಕಾರದ ಶಪಥ ಮಾಡಿತ್ತು.

ಟೆಹರಾನ್‌: ಇರಾನ್ ಇಸ್ರೇಲ್ ಮೇಲೆ ಶನಿವಾರ ತಡರಾತ್ರಿ ಇರಾನ್ ಸ್ಫೋಟಕ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇದು ಇಸ್ರೇಲ್ ನೆಲೆ ಮೇಲೆ ಇರಾನ್ ನಡೆಸಿದೆ ಮೊದಲ ನೇರ ದಾಳಿಯಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಛಾಯೆ ಮೂಡಿದೆ.

ಇಸ್ರೇಲ್ ರಕ್ಷಣೆಗೆ ಯುದ್ಧ ನೌಕೆಗಳನ್ನು ರವಾನಿಸುವುದಾಗಿ ಅಮೆರಿಕ ಹೇಳಿದೆ. ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ. ಎದುರಾಳಿಗಳು ಉಡಾಯಿಸುತ್ತಿರುವ ಸ್ಫೋಟಕ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸುವ ಪ್ರಯತ್ನದಲ್ಲಿ ಇಸ್ರೇಲ್ ನಿರತವಾಗಿದೆ.

ಇಸ್ರೇಲ್‌ ಕಡೆಗೆ ಭೂಮಿಯಿಂದ ಭೂಮಿಗೆ ಸಿಡಿಯುವ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಇವುಗಳಲ್ಲಿ ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ಗಡಿಯಿಂದ ಹೊರಗೇ ತಡೆಯಲಾಗಿದೆ. ಅವರು 10ಕ್ಕೂ ಹೆಚ್ಚು ಕ್ರೂಸ್ ಕ್ಷಿಪಣಿಗಳನ್ನು ಸಿಡಿಸಿದ್ದಾರೆ ಎಂದು ಇಸ್ರೇಲ್‌ನ ಸೇನಾ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ.

ಇರಾನ್‌ 200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಈವರೆಗೂ ಉಡಾಯಿಸಿದೆ. ಇದರಿಂದ ಇಸ್ರೇಲ್‌ನ ಒಂದು ಸೇನಾ ಘಟಕಕ್ಕೆ ಹಾನಿಯಾಗಿದೆ. ಇರಾನ್‌ನ ದಾಳಿಗೆ ಪ್ರತಿಯಾಗಿ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಇಸ್ರೇಲ್ ಸೇನಾ ಮೂಲಗಳು ಹೇಳಿವೆ.

ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1ರಂದು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ 7 ಮಂದಿ ಕಾವಲು ಅಧಿಕಾರಿಗಳು ಮೃತಪಟ್ಟಿದ್ದರು. ಇಸ್ರೇಲ್‌ನ ಅಪರಾಧಗಳಿಗಾಗಿ ಅದಕ್ಕೆ ಶಿಕ್ಷೆ ನೀಡಲಾಗುವುದು ಎಂದು ಇರಾನ್, ಪ್ರತೀಕಾರದ ಶಪಥ ಮಾಡಿತ್ತು.

ಇದೇ ವೇಳೆ ‘ಇರಾನ್ಸ್‌ ರೆವಲ್ಯೂಷನರಿ ಗಾರ್ಡ್‌’ ಕೊಲ್ಲಿ ಸಮೀಪ ಇಸ್ರೇಲ್‌ಗೆ ಸೇರಿದ ಕಂಟೇನರ್‌ ಹಡಗನ್ನು ವಶಪಡಿಸಿಕೊಂಡಿದೆ. ಇರಾನ್‌ ವಶಪಡಿಸಿಕೊಂಡಿರುವ ಹಡಗಿನಲ್ಲಿ 17 ಭಾರತೀಯರು ಸೇರಿ 25 ಮಂದಿ ಸಿಬ್ಬಂದಿ ಇದ್ದಾರೆ. ‘ಎಂಸಿಎಸ್‌ ಅರೀಸ್‌’ ಹೆಸರಿನ ಕಂಟೇನರ್‌ ಹಡಗನ್ನು ಇರಾನ್‌ ವಿಶೇಷ ನೌಕಾದಳ ಸಿಬ್ಬಂದಿ ವಾಯು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಇರಾನ್‌ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಭಾರತೀಯರ ಸುರಕ್ಷಿತ ಬಿಡುಗಡೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಹಡಗನ್ನು ವಶಪಡಿಸಿಕೊಂಡಿರುವ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿರುವ ಇಸ್ರೇಲ್‌, “ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚಿಸಲು ಪ್ರಯತ್ನಿಸಿದರೆ ಪರಿಣಾಮಗಳು ಭೀಕರವಾಗಿರುತ್ತವೆ. ಮುಂದಾಗುವ ಪರಿಣಾಮಗಳನ್ನು ಇರಾನ್‌ ಊಹಿಸಲು ಸಾಧ್ಯವಾಗದು,” ಎಂದು ಎಚ್ಚರಿಕೆ ನೀಡಿದೆ.

ಸಿರಿಯಾದ ಡೆಮಾಸ್ಕಸ್‌ ಮೇಲಿನ ಇಸ್ರೇಲ್‌ ವಾಯು ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್‌ ಭಾನುವಾರದೊಳಗೆ ನೇರ ದಾಳಿ ಮಾಡುವ ಸಂಭವವಿದೆ ಎಂದು ಎಚ್ಚರಿಸಿರುವ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಪ್ರಾದೇಶಿಕ ಯುದ್ಧಕ್ಕೆ ನಾಂದಿಯಾಗುವ ಅಪಾಯವಿದೆ ಎಂದು ಗುಪ್ತಚರ ಇಲಾಖೆ ವರದಿ ಉಲ್ಲೇಖಿಸಿ ಮಾಹಿತಿ ನೀಡಿತ್ತು.

”ಇಸ್ರೇಲ್‌ ಮೇಲೆ ಇರಾನ್‌ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡಬಹುದು. ಮುಂದಿನ 24 ಗಂಟೆಯಲ್ಲಿ ಯುದ್ಧ ಶುರುವಾಗಬಹುದು,” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕಳವಳ ವ್ಯಕ್ತಪಡಿಸಿದ್ದರು. ಮುಂಜಾಗ್ರತೆ ಕ್ರಮವಾಗಿ ಮೆಡಿಟೇರಿಯನ್‌ ಸಾಗರದಲ್ಲಿ ಯುದ್ಧನೌಕೆಯನ್ನು ಅಮೆರಿಕ ನಿಯೋಜಿಸಿದೆ.

error: Content is protected !! Not allowed copy content from janadhvani.com