janadhvani

Kannada Online News Paper

ಖಾಸಗಿ ಹಜ್ ಏಜೆನ್ಸಿ ; ಸೌದಿ ಅರೇಬಿಯಾಕ್ಕೆ ನೇರ ಪಾವತಿ ಇಲ್ಲ

ಕಟ್ಟಡಗಳು ಮತ್ತು ಹಜ್‌ನ ಎಲ್ಲಾ ಇತರ ಸೇವೆಗಳಿಗಾಗಿ ಖಾಸಗಿ ಹಜ್ ಗುಂಪುಗಳಿಂದ ಸೌದಿಗೆ ನೇರ ಹಣ ರವಾನೆಗೆ ನಿಯಂತ್ರಣ ಹೇರಲಾಗಿದೆ. ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಖಾಸಗಿ ಹಜ್ ಗುಂಪುಗಳೊಂದಿಗೆ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ತನ್ನ ನೀತಿಯನ್ನು ಪರಿಷ್ಕರಿಸಿದೆ.

ಈ ಹಿಂದೆ, ಖಾಸಗಿ ಹಜ್ ಗುಂಪುಗಳು ಇ-ಹಜ್ ಪೋರ್ಟಲ್ ಮೂಲಕ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಬ್ಯಾಂಕ್‌ಗಳಿಗೆ ನೇರ ಪಾವತಿಗಳನ್ನು ಮಾಡುತ್ತಿದ್ದವು. ಆದರೆ ಈ ವರ್ಷದಿಂದ ಅದನ್ನು ನಿರ್ಬಂಧಿಸಲಾಗಿದೆ.
ಹೊಸ ನೀತಿಯ ಪ್ರಕಾರ, ಖಾಸಗಿ ಹಜ್ ಗುಂಪುಗಳು ಕೇಂದ್ರ ಹಜ್ ಸಮಿತಿಯ ಖಾತೆಗೆ ಪಾವತಿಸಬೇಕಾಗುತ್ತದೆ. ಇದಕ್ಕಾಗಿ, ಈ ಹಿಂದೆ ಅಭಿವೃದ್ಧಿಪಡಿಸಿದ ಎಸ್‌ಬಿಐ ಪೋರ್ಟಲ್ ಅನ್ನು ಬಳಸಬೇಕು.

ಈ ರೀತಿಯಾಗಿ, ಕೇಂದ್ರ ಹಜ್ ಸಮಿತಿಯ ಖಾತೆಯನ್ನು ತಲುಪುವ ಖಾಸಗಿ ಹಜ್ ಗುಂಪುಗಳ ಒಟ್ಟು ಮೊತ್ತವನ್ನು ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಖಾತೆಗೆ ಜಮಾ ಮಾಡಲಾಗುತ್ತದೆ.

ಪ್ರತಿ ಹಜ್ ಗುಂಪಿನ ಹಣವನ್ನು ಪ್ರತ್ಯೇಕವಾಗಿ ಭಾರತದ ಕಾನ್ಸುಲೇಟ್ ಜನರಲ್ ಮೂಲಕ ಸೌದಿ ಹಜ್ ಸಚಿವಾಲಯದ ಸಂಬಂಧಪಟ್ಟ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಜಿಗಳು ವಾಸಿಸಲು ಕಟ್ಟಡವನ್ನು ಸಿದ್ಧಪಡಿಸಲು ಹಜ್ ಗ್ರೂಪ್ ನವರು ಸೌದಿಯ ಸ್ಥಳೀಯ ಕಟ್ಟಡ ಮಾಲೀಕರೊಂದಿಗೆ ಮುಂಚಿತವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ.

ಅದರ ನಂತರ, ಸೌದಿ ಅಧಿಕಾರಿಗಳು ಕಟ್ಟಡದ ಪರವಾನಗಿ ಸೇರಿದಂತೆ ಇತರ ವಿಷಯಗಳನ್ನು ಪರಿಶೀಲಿಸಿ ನಂತರ ಕಟ್ಟಡ ಮಾಲೀಕರೊಂದಿಗೆ ಅಂತಿಮ ಒಪ್ಪಂದಕ್ಕೆ ಬರುತ್ತಾರೆ. ಇದರ ನಂತರ, ಹಣವನ್ನು ಇ-ಹಜ್ ಪೋರ್ಟಲ್ ಮೂಲಕ ಸೌದಿ ಹಜ್ ಸಚಿವಾಲಯದ ಅಡಿಯ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ.

ಹಣವನ್ನು ವಿವಿಧ ಸೇವೆಗಳಿಗೆ ಆಗಾಗ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇನ್ನು ಎಲ್ಲ ಉದ್ದೇಶಗಳಿಗೂ ಕೇಂದ್ರ ಹಜ್ ಸಮಿತಿ ಖಾತೆಗೆ ಹಣ ಪಾವತಿಸಿದರೆ ಸಾಕು. ಸೌದಿಯ ಪರಿಷ್ಕೃತ ನೀತಿಯ ಅಡಿಯಲ್ಲಿ, ಖಾಸಗಿ ಹಜ್ ಗುಂಪುಗಳು ಭಾರತದಲ್ಲಿ ಎಲ್ಲಾ ವಹಿವಾಟುಗಳನ್ನು ನಡೆಸಲು ಹೆಚ್ಚು ಅನುಕೂಲಕರವಾಗಿದೆ. ಅದೇ ಸಮಯದಲ್ಲಿ, ಹೆಚ್ಚಿನ ಮೊತ್ತದ ಪಾವತಿಯಾಗಿರುವುದರಿಂದ ಇಲ್ಲಿನ ತೆರಿಗೆ ಕೂಡ ಹೆಚ್ಚೇ ಪಾವತಿಸಬೇಕಾಗಬಹುದು.

error: Content is protected !! Not allowed copy content from janadhvani.com