janadhvani

Kannada Online News Paper

ಸೌದಿ: ನಿರಂತರ ಎಚ್ಚರಿಕೆಗಳ ಕಡೆಗಣನೆ- 500 ಕ್ಕೂ ಮಿಕ್ಕ ಕಾರುಗಳು ಪೋಲೀಸ್ ವಶಕ್ಕೆ

ಏತನ್ಮಧ್ಯೆ, ಮದೀನಾ ಹಾಗೂ ಇತರ ಕಡೆಗಳಿಂದ ಮಕ್ಕಾಕ್ಕೆ ಖಾಸಗೀ ವಾಹನದಲ್ಲಿ ಪ್ರಯಾಣಿಸುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ.

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದ ಅಕ್ರಮ ಟ್ಯಾಕ್ಸಿಗಳ ವಿರುದ್ಧ ಸಾರ್ವಜನಿಕ ಸಾರಿಗೆ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಕಳೆದ ಕೆಲವು ದಿನಗಳಲ್ಲಿ, ಪ್ರಾಧಿಕಾರವು 500 ಕ್ಕೂ ಮಿಕ್ಕ ಕಾರುಗಳು ಮತ್ತು ಅವುಗಳ ಚಾಲಕರನ್ನು ವಶಪಡಿಸಿಕೊಂಡಿದೆ. ಗೃಹ ಸಚಿವಾಲಯದ ಸಹಯೋಗದಲ್ಲಿ ನಡೆಸಿದ ಕಣ್ಗಾವಲು ಅಭಿಯಾನದ ಮೂಲಕ ಈ ಸಂಖ್ಯೆಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣಗಳಿಂದ ಅಕ್ರಮ ಟ್ಯಾಕ್ಸಿ ಸೇವೆಗಳನ್ನು ನಡೆಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.

ಈ ಕಾನೂನು ಉಲ್ಲಂಘನೆ ವಿರುದ್ಧ ಕ್ರಮವನ್ನು ಕಠಿಣಗೊಳಿಸಲಾಗುವುದು ಎಂದು ಸಾರ್ವಜನಿಕ ಸಾರಿಗೆ ಪ್ರಾಧಿಕಾರ ಇತ್ತೀಚೆಗೆ ಪ್ರಕಟಿಸಿತ್ತು. ಅಕ್ರಮ ಟ್ಯಾಕ್ಸಿ ಸೇವೆಗಳನ್ನು ನಡೆಸುವವರ ವಿರುದ್ಧ 5,000 ರಿಯಾಲ್ ದಂಡ ಮತ್ತು ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಾರಿಗೆ ಪ್ರಾಧಿಕಾರವು ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಮತ್ತು ಆರಾಮದಾಯಕ ಸಾರಿಗೆ ಅನುಭವವನ್ನು ಒದಗಿಸುವ ಮತ್ತು ವಿಮಾನ ನಿಲ್ದಾಣಗಳಲ್ಲಿನ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ನಕಲಿ ಟ್ಯಾಕ್ಸಿಗಳ ವಿರುದ್ಧ ಕಣ್ಗಾವಲು ತೀವ್ರಗೊಳಿಸಿದೆ.

ಟ್ಯಾಕ್ಸಿ ಪರ್ಮಿಟ್ ಇಲ್ಲದೆ ಪ್ರಯಾಣಿಕರನ್ನು ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳುವುದು ನಾಗರಿಕ ವಿಮಾನಯಾನ ಜನರಲ್ ಅಥಾರಿಟಿಯ ಸಹಯೋಗದೊಂದಿಗೆ ಇತ್ತೀಚೆಗೆ ಜಾರಿಗೆ ತಂದ ಕಾನೂನು ಕ್ರಮವಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಏತನ್ಮಧ್ಯೆ, ಮದೀನಾ ಹಾಗೂ ಇತರ ಕಡೆಗಳಿಂದ ಮಕ್ಕಾಕ್ಕೆ ಖಾಸಗೀ ವಾಹನದಲ್ಲಿ ಪ್ರಯಾಣಿಸುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ಈ ರೀತಿ ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ದಂಡ ವಿಧಿಸಿರುವುದಾಗಿ ಅನುಭವಸ್ಥರು ಮಾಹಿತಿ ನೀಡಿದ್ದಾರೆ. ಮಕ್ಕಾಕ್ಕೆ ಅಥವಾ ಅಲ್ಲಿಂದ ಮರಳುವಾಗ ಸಾರ್ವಜನಿಕ ಬಸ್ ಅಥವಾ ಅಧಿಕೃತ ಟ್ಯಾಕ್ಸಿಗಳನ್ನು ಅವಳಂಬಿಸುವಂತೆ ಸಾಮಾಜಿಕ ಕಾರ್ಯಕರ್ತರು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com