janadhvani

Kannada Online News Paper

ಕಾಸರಗೋಡು: ರಿಯಾಝ್ ಮೌಲವಿ ಹತ್ಯೆ ಪ್ರಕರಣ- ಆರ್‌ಎಸ್‌ಎಸ್‌ ಕಾರ್ಯಕರ್ತರಾದ ಆರೋಪಿಗಳು ಖುಲಾಸೆ

2017ರ ಮಾರ್ಚ್ 20ರಂದು ಕಾಸರಗೋಡಿನ ಹಳೇ ಚೂರಿ ಮದ್ರಸದಲ್ಲಿ ಶಿಕ್ಷಕರಾಗಿದ್ದ ಕರ್ನಾಟಕದ ಕೊಡಗು ಮೂಲದ ಮುಹಮ್ಮದ್ ರಿಯಾಝ್ ಮೌಲವಿಯನ್ನು ಆರೋಪಿಗಳು ಕತ್ತು ಕೊಯ್ದು ಕೊಲೆ ಮಾಡಿದ್ದರು.

ಕಾಸರಗೋಡು | ಮುಹಮ್ಮದ್ ರಿಯಾಝ್ ಮೌಲವಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಾದ ಎಲ್ಲಾ ಮೂವರು ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಎಂಟನೇ ನ್ಯಾಯಾಧೀಶರಾದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಕೆ.ಬಾಲಕೃಷ್ಣನ್ ಪ್ರಕರಣದ ತೀರ್ಪು ಪ್ರಕಟಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರಾದ ಅಜೇಶ್, ನಿತಿನ್ ಕುಮಾರ್ ಮತ್ತು ಅಖಿಲೇಶ್‌ ಅವರನ್ನು ಬಿಡುಗಡೆ ಮಾಡಲಾಯಿತು. ಪ್ರಕರಣದ ಷಡ್ಯಂತ್ರ ಹೊರಬರಬೇಕಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಯೋಚಿಸಿ ನಿರ್ಧರಿಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ತೀರ್ಪಿನಿಂದ ನೋವಾಗಿದೆ ಎಂದು ಕ್ರಿಯಾ ಸಮಿತಿ ಹೇಳಿದೆ.

ಆರೋಪಿಗಳಿಗೆ ಇನ್ನೂ ಜಾಮೀನು ಸಿಗದ ಕಾರಣ ಏಳು ವರ್ಷಗಳಿಂದ ಜೈಲಿನಲ್ಲಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. 2017ರ ಮಾರ್ಚ್ 20ರಂದು ಕಾಸರಗೋಡಿನ ಹಳೇ ಚೂರಿ ಮದ್ರಸದಲ್ಲಿ ಶಿಕ್ಷಕರಾಗಿದ್ದ ಕರ್ನಾಟಕದ ಕೊಡಗು ಮೂಲದ ಮುಹಮ್ಮದ್ ರಿಯಾಝ್ ಮೌಲವಿಯನ್ನು ಆರೋಪಿಗಳು ಕತ್ತು ಕೊಯ್ದು ಕೊಲೆ ಮಾಡಿದ್ದರು.

ಮಸೀದಿಯ ಒಳ ಕೋಣೆಯಲ್ಲಿ ಮಲಗಿದ್ದ ರಿಯಾಝ್ ಮೌಲವಿಯವರನ್ನು ಅತಿಕ್ರಮ ಪ್ರವೇಶ ಮಾಡಿದ ಆರೋಪಿಗಳು ಕತ್ತು ಸೀಳಿ ಹತ್ಯೆ ಮಾಡಿದ್ದರು. ಆರೋಪಿಗಳು ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ತಿಳಿಸಿತ್ತು.

ಘಟನೆ ನಡೆದ ಮೂರು ದಿನಗಳಲ್ಲಿ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ 97 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. 215 ದಾಖಲೆಗಳು ಮತ್ತು 45 ಉಪಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕಣ್ಣೂರು ಅಪರಾಧ ವಿಭಾಗದ ಎಸ್ಪಿ ಡಾ. ಎ ಶ್ರೀನಿವಾಸ್ ನೇತೃತ್ವದಲ್ಲಿ ಅಂದಿನ ಇನ್ಸ್‌ ಪೆಕ್ಟರ್ ಪಿ.ಕೆ.ಸುಧಾಕರನ್ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸಿತ್ತು.

90 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. 2019ರಲ್ಲಿ ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು.
ನ್ಯಾಯಾಲಯದ ತೀರ್ಪು ನಿರಾಸೆ ತಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com