janadhvani

Kannada Online News Paper

ಉದ್ಯೋಗ ವೀಸಾಗಳಿಗೆ ಏಕೀಕೃತ ವೇದಿಕೆ- ವೀಸಾ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಪೂರ್ಣ

ಹೊಸ ವೇದಿಕೆಯು ಯುಎಇಯ ಎರಡೂವರೆ ಮಿಲಿಯನ್ ಖಾಸಗಿ ಕಂಪನಿಗಳಿಗೆ ಉಪಯುಕ್ತವಾಗಲಿದೆ ಎಂದು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಗಮನಸೆಳೆದಿದ್ದಾರೆ.

ದುಬೈ: ಕೆಲಸದ ವೀಸಾ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಯುಎಇಯಲ್ಲಿ ಏಕೀಕೃತ ವೇದಿಕೆಯನ್ನು ಘೋಷಿಸಲಾಗಿದೆ. ‘ವರ್ಕ್ ಬಂಡಲ್’ ಆನ್‌ಲೈನ್ ವ್ಯವಸ್ಥೆ ಮೂಲಕ ಒಂದು ತಿಂಗಳು ತೆಗೆದುಕೊಳ್ಳುತ್ತಿದ್ದ ವರ್ಕ್ ಪರ್ಮಿಟ್ ಮತ್ತು ರೆಸಿಡೆಂಟ್ ವೀಸಾ ಪ್ರಕ್ರಿಯೆಗಳನ್ನು ಐದು ದಿನಗಳಲ್ಲಿ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವೇದಿಕೆಯು ಯುಎಇಯ ಎರಡೂವರೆ ಮಿಲಿಯನ್ ಖಾಸಗಿ ಕಂಪನಿಗಳಿಗೆ ಉಪಯುಕ್ತವಾಗಲಿದೆ ಎಂದು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಆಲ್ ಮಖ್ತೂಂ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಗಮನಸೆಳೆದಿದ್ದಾರೆ. ವರ್ಕ್ ಬಂಡಲ್ ವ್ಯವಸ್ಥೆಯ ಮೂಲಕ ಒಂದು ತಿಂಗಳು ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆಗಳನ್ನು ಐದು ದಿನಗಳಲ್ಲಿ ಪೂರ್ಣಗೊಳಿಸಬಹುದು. ಐದು ಸರ್ಕಾರಿ ಸಂಸ್ಥೆಗಳ ಎಂಟು ಸೇವೆಗಳು ವರ್ಕ್ ಬಂಡಲ್ ಅಡಿಯಲ್ಲಿ ಬರುತ್ತವೆ.

ವೀಸಾಗಾಗಿ ಸಲ್ಲಿಸಬೇಕಾದ 16 ದಾಖಲೆಗಳನ್ನು ಐದಕ್ಕೆ ಇಳಿಸಲಾಗುತ್ತದೆ. ಹೊಸ ಕೆಲಸದ ಪರವಾನಿಗೆ, ಕೆಲಸದ ವೀಸಾ, ನವೀಕರಣ ಪ್ರಕ್ರಿಯೆ, ರದ್ದತಿ ಪ್ರಕ್ರಿಯೆ, ವೈದ್ಯಕೀಯ ಪರೀಕ್ಷೆ ಮತ್ತು ಐಡಿಗಾಗಿ ಫಿಂಗರ್ ಪ್ರಿಂಟ್ ತೆಗೆದುಕೊಳ್ಳುವ ಸೇವೆಗಳೆಲ್ಲವೂ ಇದರ ಅಡಿಯಲ್ಲಿ ಬರುತ್ತವೆ. ಇನ್ವೆಸ್ಟ್ ದುಬೈ ಪ್ಲಾಟ್‌ಫಾರ್ಮ್ ಮೂಲಕ ದುಬೈನಲ್ಲಿ ಮೊದಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಜಿಡಿಆರ್‌ಎಫ್‌ಎ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಂತರ, ವರ್ಕ್ ಬಂಡಲ್ ಪ್ಲಾಟ್‌ಫಾರ್ಮ್ ಅನ್ನು ಯುಎಇಯ ಇತರ ಎಮಿರೇಟ್‌ಗಳಿಗೆ ವಿಸ್ತರಿಸಲಾಗುವುದು.

error: Content is protected !! Not allowed copy content from janadhvani.com