janadhvani

Kannada Online News Paper

ದುಬೈ : ಕಾರು ಅಪಘಾತದಲ್ಲಿ ಮಂಗಳೂರಿನ ಯುವತಿ ಮೃತ್ಯು

ಆರು ತಿಂಗಳ ಹಿಂದೆ ವಿದಿಶಾ ದುಬೈ ಡ್ರೈವಿಂಗ್ ಲೈಸೆನ್ಸ್ ಪಡೆದು ಹೊಸ ಕಾರು ಖರೀದಿಸಿದ್ದರು.

ಮಂಗಳೂರು: ದುಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ.

ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರುಷ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

2019ರಲ್ಲಿ ದುಬೈಗೆ ತೆರಳಿ ಎಕ್ಸ್‌ಕ್ಯೂಜೆಟ್‍ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರುಷಗಳಿಂದ ಕಾರ್ಯನಿರ್ವಹಿಸಿದ್ದರು. ಪ್ರತೀ ದಿನ ಕಂಪೆನಿಯ ಕ್ಯಾಬ್‍ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಫೆ. 22ರ ಗುರುವಾರ ತಡವಾಯಿತು ಎಂದು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ.

ಅಪಘಾತದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದೆಸೆಯಲ್ಲೇ ರೋಟರ್ಯಾಕ್ಟ್ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

ದುಬೈಯಲ್ಲಿ ವಾಹನ ಚಾಲನಾ ಲೈಸೆನ್ಸ್ ಪಡೆದ ಬಳಿಕ ಕಳೆದ ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದ ವಿದಿಶಾ ತಂದೆ, ತಾಯಿಯನ್ನು ದುಬೈಗೆ ಕರೆಸಿ ಕಾರಿನಲ್ಲಿ ಸುತ್ತಾಡಿಸಿದ್ದರು. ತಂದೆ-ತಾಯಿ ಮಗಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ನಡೆದಿದೆ.

error: Content is protected !! Not allowed copy content from janadhvani.com