ಅಬುಧಾಬಿ: ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ನಾಮಕರಣ ಮಾಡಲಾಗಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣವನ್ನು ಝಾಯಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವುದು. ಶುಕ್ರವಾರದಿಂದ ಹೊಸ ಹೆಸರು ಜಾರಿಗೆ ಬಂದಿದೆ.
ಶೈಖ್ ಝಾಯಿದ್ ಅವರ ಗೌರವಾರ್ಥವಾಗಿ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ. ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರ ಸೂಚನೆ ಮೇರೆಗೆ ಹೆಸರು ಬದಲಾವಣೆ ಮಾಡಲಾಗಿದೆ. ಮರುನಾಮಕರಣ ಪ್ರಯುಕ್ತ, ಝಾಯಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಈ ವಾರದಿಂದ ಈ ತಿಂಗಳ 11 ರವರೆಗೆ ಹಲವಾರು ವಿಧದ ಸಂಭ್ರಮವನ್ನು ಆಯೋಜಿಸಲಾಗಿದೆ. ಏರ್‌ಪೋರ್ಟ್ ರೆಸ್ಟೋರೆಂಟ್‌ಗಳು, ಅಂಗಡಿಗಳು, ಕೆಫೆಗಳು, ಡ್ಯೂಟಿ ಫ್ರೀ ಈ ಸ್ಥಳಗಳಲ್ಲಿ ರಿಯಾಯಿತಿಗಳು ಮತ್ತು ವಿಶೇಷ ಕೊಡುಗೆಗಳು ಇರಲಿದೆ.742,000 ಚದರ ಮೀಟರ್ ಸ್ಥಳವು ಝಾಯಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇರಿದೆ. ಪ್ರತಿ ವರ್ಷ 4.5 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತದೆ.
ಅದೇ ಸಮಯದಲ್ಲಿ, ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ತ್ವರಿತ ಚೆಕ್-ಇನ್ ಸೌಲಭ್ಯವನ್ನು ಸಿದ್ಧಪಡಿಸಿದೆ. ಹೊಸ ಟರ್ಮಿನಲ್ ಎ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ. ಚೆಕ್-ಇನ್ 10 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಬೋರ್ಡಿಂಗ್ ಕೇವಲ ಮೂರು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.ಪ್ರಯಾಣಿಕರು ಕಾದು ಸುಸ್ತಾಗದೆ ಚೆಕ್-ಇನ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಇದು ತುಂಬಾ ಅನುಕೂಲಕರವಾಗಿದೆ.