janadhvani

Kannada Online News Paper

ನೂತನವಾದವನ್ನು ಎದುರಿಸುವುದು ಉಲಮಾಗಳ ಕರ್ತವ್ಯ- ಸಯ್ಯಿದುಲ್ ಉಲಮಾ ಜಿಫ್ರಿ ತಂಙಳ್

ಇಸ್ಲಾಮಿನ ನೈಜ ರೂಪವಾದ ಅಹ್ಲುಸ್ಸುನ್ನತ್ತಿನ ಆಶಯ ಆದರ್ಶಗಳಿಗೆ ವಿರುದ್ಧವಾಗಿ ಯಾವುದೇ ಕಾಲದಲ್ಲಿ ಯಾರೇ ಬಂದರೂ ಅಂತಹವರನ್ನು ಎದುರಿಸುವುದು ಆ ಕಾಲಘಟ್ಟದ ಉಲಮಾಗಳ ಕರ್ತವ್ಯವಾಗಿದೆ.

ಬೆಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯು ಅತ್ಯುನ್ನತ ಮೌಲ್ಯಗಳಿಂದ ಸ್ಥಾಪಿತಗೊಂಡಿದ್ದು, ಯಾವುದೇ ಶಕ್ತಿಗೂ ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಸುಭದ್ರವಾಗಿದೆ. ಸಮಸ್ತದ ಈ ಶಕ್ತಿಯನ್ನು ಎಲ್ಲರೂ ಅಂಗೀಕರಿಸುವುದರೊಂದಿಗೆ ಅದರ ಬೆಳವಣಿಗೆಗೆ ಅಗತ್ಯವಾದ ಸಹಕಾರವನ್ನು ನೀಡಬೇಕಿದೆ ಎಂದು ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಕರೆ ನೀಡಿದರು.

ರವಿವಾರ ನಗರದ ಅರಮನೆ ಮೈದಾನದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ ನೂರನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಂಘಟನೆಯನ್ನು ಶಿಥಿಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನೆರೆದಿರುವ ಜನ ಸಾಗರವನ್ನು ಸಾಕ್ಷಿಯಾಗಿಸಿ ಹೇಳುತ್ತಿದ್ದೇನೆ ಎಂದು ಸಯ್ಯಿದರು ಹೇಳಿದರು. ಸಮಸ್ತದಂತಹಾ ಧಾರ್ಮಿಕ ಸಂಘಟನೆಗಳನ್ನು ತನ್ನದೇ ಆದ ಕೆಲವು ಮೌಲ್ಯಗಳ ಆಧಾರದಲ್ಲಿ ಮಹಾತ್ಮರಾದ ಪೂರ್ವಿಕ ಉಲಮಾಗಳು ಸ್ಥಾಪಿಸಿದ್ದು, ಆ ಮೌಲ್ಯಗಳನ್ನು ಎತ್ತಿ ಹಿಡಿದು ಮುಂದೆ ಸಾಗಬೇಕಾಗಿದೆ ಎಂದರು.

ಇಸ್ಲಾಮಿನ ನೈಜ ರೂಪವಾದ ಅಹ್ಲುಸ್ಸುನ್ನತ್ತಿನ ಆಶಯ ಆದರ್ಶಗಳಿಗೆ ವಿರುದ್ಧವಾಗಿ ಯಾವುದೇ ಕಾಲದಲ್ಲಿ ಯಾರೇ ಬಂದರೂ ಅಂತಹವರನ್ನು ಎದುರಿಸುವುದು ಆ ಕಾಲಘಟ್ಟದ ಉಲಮಾಗಳ ಕರ್ತವ್ಯವಾಗಿದೆ. ಪ್ರವಾದಿ ಮುಹಮ್ಮದ್ ಸ.ಅ.ರ ಕಾಲದ ನಂತರ ನೂತನವಾದಿಗಳು ಪ್ರತ್ಯಕ್ಷಗೊಳ್ಳಲು ಆರಂಭಿಸಿದ್ದಾರೆ. ಆ ಕಾಲದಲ್ಲಿ ಅಲಿಯ್ಯ್ (ರ.ಅ), ಅಬ್ದುಲ್ಲಾಹಿಬಿನ್ ಉಮರ್ (ರ.ಅ)ಮುಂತಾದ ಸ್ವಹಾಬಿಗಳು ಬಿದ್ಅತ್ ವಿರುದ್ದ ಕಾರ್ಯಾಚರಿಸಿದ್ದಾರೆ. ಮಹಾತ್ಮರಾದ ಪೂರ್ವಿಕ ಇಮಾಮರ ಕಾಲದಲ್ಲೂ ಬಿದ್ಅತ್ ವಿರುದ್ಧ ಹಲವಾರು ಸಂವಾದಗಳು ನಡೆದಿದೆ. ಇದೇ ಹಾದಿಯಲ್ಲಿ ನಡೆಯುವುದಾಗಿದೆ ‘ಸಮಸ್ತ’ ಸ್ಥಾಪನೆಯ ಪ್ರಮುಖ ಉದ್ದೇಶ.

ನೂತನವಾದ ಪ್ರತ್ಯಕ್ಷಗೊಂಡ ವೇಳೆಯಲ್ಲಿ ಧಾರ್ಮಿಕ ಉಲಮಾಗಳು ಮೌನಿಗಳಾದರೆ ಅವರ ಮೇಲೆ ಅಲ್ಲಾಹನ ಶಾಪವಿರಲಿದೆ ಎಂಬ ಪ್ರವಾದಿ ಸ.ಅ ರ ವಚನವನ್ನು ಕಡೆಗಣಿಸಿ ಉಲಮಾಗಳಿಗೆ ಮೌನವಹಿಸಲು ಸಾಧ್ಯವಿಲ್ಲ. ಆದನ್ನು ಎದುರಿಸುವುದು ನೈಜ ಉಲಮಾಗಳ ಮೇಲೆ ಕಡ್ಡಾಯವಾಗಿದೆ.ಈ ಕರ್ತವ್ಯವನ್ನು ಸಮಸ್ತದ ಉಲಮಾಗಳು ನಿರ್ವಹಿಸುತ್ತಿದ್ದಾರೆಂದು ಸಯ್ಯಿದುಲ್ ಉಲಮಾ ಹೇಳಿದರು.

ನೂರನೇ ವರ್ಷಚಾರಣೆಯ ಪ್ರಯುಕ್ತ ಬೆಂಗಳೂರಿನಲ್ಲಿ ಸಮಸ್ತ ಮುಶಾವರ ಸಮಿತಿ ಸದಸ್ಯರು ಸಭೆ ಸೇರಿ ಕೈಗೊಂಡಿರುವ ಆರು ನಿರ್ಣಯಗಳನ್ನು ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಪ್ರಕಟಿಸಿದರು.

ನಿರ್ಣಯಗಳು:

  • ಅಹ್ಲುಸ್ಸುನ್ನತ್ತ್ ವಲ್ ಜಮಾಅತ್ ಆಶಯಗಳನ್ನು ರಾಷ್ಟ್ರ ಮತ್ತು ಅಂತ‌ರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಹೊಸ ವಿಧಗಳ ಆವಿಷ್ಕಾರ ಮಾಡುವುದು.
  • ಸಮಸ್ತದ ಕಾರ್ಯಚಟುವಟಿಕೆಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೀಕರಣಗೊಳಿಸಲು ಸಮನ್ವಯ ಸಮಿತಿ ರಚನೆ ಮಾಡುವುದು.
  • ಬೆಂಗಳೂರನ್ನು ಕೇಂದ್ರವಾಗಿಟ್ಟು ಉನ್ನತ ವಿದ್ಯಾಭ್ಯಾಸ ಕೇಂದ್ರ ಸ್ಥಾಪನೆ.
  • ಈಗಿರುವ ವಿದ್ಯಾಭ್ಯಾಸ ಕೇಂದ್ರಗಳನ್ನು ಮತ್ತಷ್ಟು ಉನ್ನತೀಕರಣಗೊಳಿಸುವುದು.
  • ಸಾಮೂಹಿಕವಾಗಿ ಸ್ವಯಂ ಸೇವೆ ಮಾಡುವ ಪದ್ಧತಿ ಈಗಾಗಲೆ ಜಾರಿಯಲ್ಲಿದೆ. ಅದಕ್ಕೆ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು.
  • ಅಹ್ಲು ಸುನ್ನತ್ ವಲ್ ಜಮಾಅತ್‌ನ ಆಶಯ ಮತ್ತು ಆದರ್ಶಗಳಿಗೆ ವಿಧೇಯಕವಾಗಿ ಪ್ರಬೋಧನಾ ರಂಗದಲ್ಲಿ ಹೊಸ ನೀತಿಗಳನ್ನು ಪರಿಚಯಿಸುವುದು.

error: Content is protected !! Not allowed copy content from janadhvani.com