ನವದೆಹಲಿ: ಇದೇ ತಿಂಗಳ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿರುವ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಈ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸುತ್ತೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರು ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಮೊದಲ ಹಂತದಲ್ಲಿ ಪಾಲ್ಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು ಆದರೆ ‘ಇಂಡಿಯಾ’ ಒಕ್ಕೂಟದ ಒತ್ತಡದಿಂದಾಗಿ ಬಿಕ್ಕಟ್ಟಿಗೆ ಸಿಲುಕಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ಸಮಾರಂಭವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಾರ್ಯಕ್ರಮವಾಗಿದೆ. ಧರ್ಮವು ವೈಯಕ್ತಿಕ ವಿಷಯವಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಯೋಧ್ಯೆಯನ್ನು ರಾಜಕೀಯ ಯೋಜನೆಯನ್ನಾಗಿ ಮಾಡಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಬಿಜೆಪಿ, ಆರೆಸ್ಸೆಸ್ ನಾಯಕರು ಅಯೋಧ್ಯೆಯಲ್ಲಿ ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ ಮತ್ತು ರಾಮ ಭಕ್ತರ ಭಾವನೆಗಳನ್ನು ಗೌರವಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.