ರಿಯಾದ್: ಮದೀನಾದಲ್ಲಿ ರೌಳಾ ಷರೀಫ್‌ಗೆ ವಿಶ್ವಾಸಿಗಳ ಪ್ರವೇಶಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ.ಈಗ ರೌಳಾ ಪ್ರವೇಶವನ್ನು ವರ್ಷಕ್ಕೆ ಒಂದು ಬಾರಿಯೆಂದು ನಿಗದಿಪಡಿಸಲಾಗಿದೆ ಎಂದು ಮಲಯಾಳಂ ಪತ್ರಿಕೆಗಳ ಗಲ್ಫ್ ಆವೃತ್ತಿಯಲ್ಲಿ ವರದಿಯಾಗಿದೆ.
ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಪರವಾನಗಿ ಪಡೆಯುವ ವೇದಿಕೆಯಾಗಿರುವ ‘ನುಸುಕ್’ ನಲ್ಲಿ ವ್ಯಕ್ತವಾಗಿರುವುದಾಗಿ ಹೇಳಲಾಗಿದೆ. ಜನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಒಂದು ಭೇಟಿಯ ನಂತರ 365 ದಿನಗಳ ನಂತರ ಮಾತ್ರ ಪರವಾನಗಿಯನ್ನು ನೀಡಲಾಗುತ್ತದೆ. ಈ ನಿಯಂತ್ರಣವು ಸೌದಿ ಅರೇಬಿಯಾದಲ್ಲಿ ನಿವಾಸ ವೀಸಾ ಹೊಂದಿರುವವರಿಗೆ ಮಾತ್ರ ಸೀಮಿತವೇ? ಅಲ್ಲ, ಉಮ್ರಾ ವೀಸಾದಲ್ಲಿ ಆಗಮಿಸುವವರಿಗೊ ಅನ್ವಯವೇ? ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಲಿದೆ.
ಪ್ರವಾದಿಯವರ ಮನೆ ಮತ್ತು ಮಸೀದಿಯ ಮಿಂಬರ್ ನಡುವಿನ ಸ್ಥಳವನ್ನು ‘ರೌಳಾ ಷರೀಫ್’ ಎಂದು ಕರೆಯಲಾಗುತ್ತದೆ. ಕೋವಿಡ್ ನಂತರ, ಈ ಪವಿತ್ರ ಸ್ಥಳಕ್ಕೆ ಪ್ರವೇಶವನ್ನು ಪರವಾನಗಿ ಮೂಲಕ ಅನುಮತಿಸಲಾಗುತ್ತದೆ.
ಈ ಹಿಂದೆ ತಿಂಗಳಿಗೆ ಒಂದು ಬಾರಿ ಪ್ರವೇಶಕ್ಕೆ ಅನುಮತಿಸಲಾಗುತ್ತಿತ್ತು, ಜನದಟ್ಟಣೆಯ ಹಿನ್ನೆಲೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಪ್ರವೇಶಾನುಮತಿ ಎಂದು ಹೇಳಲಾಗುತ್ತಿದ್ದು, ಸೌದಿ ಅರೇಬಿಯಾದ ಯಾವುದೇ ಅಧಿಕೃತ ಮೂಲಗಳಿಂದ ಈ ಬಗ್ಗೆ ವರದಿಯಾಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಆದಾಗ್ಯೂ, ಮದೀನಾದ ಮಸ್ಜಿದುನ್ನಬವಿಗೆ ಪ್ರವೇಶ, ಪ್ರಾರ್ಥನೆ ಹಾಗೂ ಪ್ರವಾದಿ ಸನ್ನಿಧಿಯಲ್ಲಿ ಸಲಾಂ ಹೇಳುವುದು ಮುಂತಾದವುಗಳಿಗೆ ಯಾವುದೇ ನಿಯಂತ್ರಣವನ್ನು ಏರ್ಪಡಿಸಲಾಗಿಲ್ಲ.