ಯಾದ್: ರಿಯಾದ್‌ನ ಖಾಸಗಿ ಮ್ಯಾನ್ ಪವರ್ ಕಂಪನಿಯಲ್ಲಿ ಡೋರ್ ಡೆಲಿವರಿ ಡ್ರೈವರ್‌ಗಳಾಗಿ ಕೆಲಸಕ್ಕೆ ಆಗಮಿಸಿದ್ದ 11 ಮಲಯಾಳಿ ಕಾರ್ಮಿಕರು ನಾಲ್ಕೈದು ತಿಂಗಳ ದುಃಖದ ದಿನಗಳನ್ನು ಕಳೆದು ಮನೆಗೆ ಮರಳಿದ್ದಾರೆ. ಆ ದುರ್ದೈವಿಗಳು ಅನಿಶ್ಚಿತತೆ ಮತ್ತು ದುರದೃಷ್ಟದ ಕಹಿ ನೀರನ್ನು ಕುಡಿದು ಸೌದಿಯನ್ನು ತೊರೆದರು.
ಆತ್ಮೀಯರ ಚಿನ್ನಾಭರಣಗಳನ್ನು ಮಾರಿ, ಗಿರವಿ ಇಟ್ಟು ಸ್ವಪ್ನಲೋಕಕ್ಕೆ ಹಾರಿದರು. ಆದರೆ ಭರವಸೆ ನೀಡಲ್ಪಟ್ಟ ಕೆಲಸವಾಗಲಿ, ಬದಲಿ ವ್ಯವಸ್ಥೆಯಾಗಲಿ ಲಭಿಸದೆ ಐದು ತಿಂಗಳಿಂದ ಪರದಾಡುವಂತಾಯಿತು. ಕೊನೆಗೆ ಭಾರತೀಯ ರಾಯಭಾರಿ ಕಚೇರಿ ಹಾಗೂ ಸಾಮಾಜಿಕ ಸಂಘಟನೆಗಳ ನೆರವಿನಿಂದ ಸಂಕಷ್ಟವನ್ನು ದಾಟಿ ಮನೆಗೆ ಮರಳಿದ್ದಾರೆ.
ಮಲಪ್ಪುರಂ ಜಿಲ್ಲೆಯ ತಿರೂರ್ ಮೂಲದ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ರಿಯಾದ್‌ಗೆ 3,000 ರಿಯಾಲ್ ಸಂಬಳ ಮತ್ತು ಇತರ ಸೌಲಭ್ಯಗಳ ಭರವಸೆಯೊಂದಿಗೆ ತೆರಳಿದರು. ನೂತನ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಲಾಗಿತ್ತು. ಆದರೆ ರಿಯಾದ್ ತಲುಪಿದಾಗ ಕೆಲಸವೂ ಇಲ್ಲ, ಸಂಬಳವೂ ಇಲ್ಲದ ಅವಸ್ಥೆ. ಶೋಚನೀಯ ಸ್ಥಿತಿಯಲ್ಲಿರುವ ವಸತಿ ಮತ್ತು ಕೆಲವೊಮ್ಮೆ ಲಭಿಸುವ ದಾಲ್ ಮತ್ತು ರೊಟ್ಟಿ ಇದಾಗಿತ್ತು ಆಹಾರ. ಕೆಲ ಸಾಮಾಜಿಕ ಕಾರ್ಯಕರ್ತರು ಆಗಾಗ ಶಿಬಿರಕ್ಕೆ ಊಟ ತರುತ್ತಿದ್ದುದು ಸಮಾಧಾನಕರವಾಗಿತ್ತು.
ಸಾಮಾಜಿಕ ಕಾರ್ಯಕರ್ತರ ಮಧ್ಯಪ್ರವೇಶದ ನಂತರ, ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಲಾಯಿತು. ನಂತರ ಭಾರತೀಯ ರಾಯಭಾರ ಕಚೇರಿ ಅವರನ್ನು ಹಿಂದಿರುಗಿಸಲು ವ್ಯವಸ್ಥೆ ಮಾಡಿತು. ಅನಿವಾಸಿ ಕ್ಷೇಮಾಭಿವೃದ್ಧಿ ಕಾರ್ಯಕರ್ತರಾದ ನಿಹ್ಮತುಲ್ಲಾ, ಬಶೀರ್ ಪಾಣಕ್ಕಾಡ್, ರಿಶಾದ್ ಎಳಮರಮ್, ಶಿಹಾಬ್ ಕುಂಡೂರು ಅವರು ಕೊನೆಯ ಹಂತದವರೆಗೂ ಸಹಕರಿಸಿ, ಪ್ರಯಾಣ ಸಂಬಂಧಿತ ವಿಷಯಗಳಲ್ಲಿ ನೆರವಾದರು. ಈಗಾಗಲೇ 11 ಮಂದಿ ಸ್ವದೇಶವನ್ನು ತಲುಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ದೇಶವನ್ನು ತಲುಪಿದಾಗ, ‘ನೋರ್ಕಾ’ ಮತ್ತು ಪೊಲೀಸರಿಗೆ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ದೂರು ದಾಖಲಿಸಲಾಗುವುದೆಂದು ಅವರು ಹೇಳಿದರು.