janadhvani

Kannada Online News Paper

ಕೊರೋನಾ ಭೀತಿ- ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳೇನು?

ಕೇರಳ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ನಿಗಾ ವಹಿಸಬೇಕು. ಈ ಭಾಗದಲ್ಲಿ ಜ್ವರದ ಲಕ್ಷಣಗಳು ಕಂಡುಬಂದರೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸಬೇಕು.

ಬೆಂಗಳೂರು, ಡಿ.22:ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳ ಬೆನ್ನಲ್ಲೇ ಗುರುವಾರ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಜತೆ ಮಹತ್ವದ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಗತ್ಯ ಪ್ರಮಾಣದ ಆಕ್ಸಿಜನ್‌, ವೆಂಟಿಲೇಟರ್‌, ಬೆಡ್‌ ಹಾಗೂ ಔಷಧಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊರೋನಾ ತೀವ್ರತೆ ಎದುರಿಸಲು ಅಗತ್ಯವಾದರೆ ಲಸಿಕಾಕರಣವನ್ನು ಮತ್ತೆ ಶುರು ಮಾಡಬೇಕು. ಕೇಂದ್ರ ನೀಡುವವರೆಗೂ ಕಾಯದೆ ರಾಜ್ಯ ಸರ್ಕಾರದ ಹಣದಿಂದಲೇ ಲಸಿಕೆಗಳನ್ನು ಖರೀದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇದೇ ವೇಳೆ, ಕೊರೋನಾ ಸೋಂಕು ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ಕೂಡ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ವಿಶ್ವದಾದ್ಯಂತ ಜೆಎನ್‌.1 ಎಂಬ ಒಮಿಕ್ರಾನ್‌ ಉಪತಳಿ ತೀವ್ರವಾಗಿ ಹರಡುತ್ತಿದೆ. ರಾಜ್ಯದಲ್ಲಿ ಕೊರೋನಾದಿಂದ ಎರಡು ದಿನದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ.

ಇವರಿಗೆ ಕೊರೋನಾ ಇದ್ದದ್ದು ದೃಢಪಟ್ಟಿದ್ದರೂ ದೀರ್ಘಕಾಲೀನ ಅನಾರೋಗ್ಯಗಳು ಸಾವಿಗೆ ಕಾರಣ. ಹೀಗಿದ್ದರೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೀರ್ಘಕಾಲೀನ ಕಾಯಿಲೆಗಳನ್ನು ಹೊಂದಿರುವ ಕೊರೋನಾ ಸೋಂಕಿತರಿಗೆ ಕೊರೋನಾ ಜತೆಗೆ ಇತರೆ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಆಗಿದ್ದ ತಪ್ಪುಗಳು ಮರುಕಳಿಸಬಾರದು ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು.

ಲಸಿಕೆ ಶುರು ಮಾಡಿ: ಕೊರೋನಾ ಎದುರಿಸಲು ಅಗತ್ಯವಿದ್ದರೆ ಕೊರೋನಾ ಲಸಿಕೆಯನ್ನೂ ಪ್ರಾರಂಭ ಮಾಡಬೇಕು. ಯಾರು ತೆಗೆದುಕೊಂಡಿಲ್ಲವೋ ಅವರೆಲ್ಲರಿಗೂ ಲಸಿಕೆ ನೀಡಬೇಕು. ರಾಜ್ಯದಲ್ಲಿ ದಾಸ್ತಾನು ಇಲ್ಲದಿದ್ದರೆ ಖರೀದಿ ಮಾಡಿ. ಕೇಂದ್ರ ಸರ್ಕಾರ ಪೂರೈಸುವವರೆಗೂ ಕಾಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಗಡಿಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ: ನಿತ್ಯ 5 ಸಾವಿರ ಮಂದಿಗೆ ಕೊರೋನಾ ಪರೀಕ್ಷೆ ನಡೆಸಬೇಕು. ಈ ಪೈಕಿ 3,500 ಆರ್‌ಟಿ-ಪಿಸಿಆರ್, 1,500 ರಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಬೇಕು. 5 ಸಾವಿರ ಪರೀಕ್ಷೆ ಪೈಕಿ ಬೆಂಗಳೂರಿನಲ್ಲೇ 1 ಸಾವಿರ ಪರೀಕ್ಷೆ ನಡೆಸಬೇಕು. ಕೇರಳ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ನಿಗಾ ವಹಿಸಬೇಕು. ಈ ಭಾಗದಲ್ಲಿ ಜ್ವರದ ಲಕ್ಷಣಗಳು ಕಂಡುಬಂದರೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸಬೇಕು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಸಿರಾಟ ತೊಂದರೆ ಹಾಗೂ ಐಎಲ್‌ಐ ಜ್ವರ ಕಂಡು ಬಂದರೆ ಕಡ್ಡಾಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಆತಂಕ ಬೇಕಿಲ್ಲ, ಎಚ್ಚರ ಅಗತ್ಯ: ರಾಜ್ಯದಲ್ಲಿ 92 ಸಕ್ರಿಯ ಸೋಂಕಿತರು ಇದ್ದಾರೆ. ಇದರಲ್ಲಿ ಬೆಂಗಳೂರು ನಗರದಲ್ಲೇ 80 ಪ್ರಕರಣ ಇವೆ. ಈ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಜತೆಗೆ ಜನರು ಸಹಕರಿಸಬೇಕು ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಸೇರಿದಂತೆ ಹಲವರು ಹಾಜರಿದ್ದರು.

ವೈಭವೀಕರಿಸಬೇಡಿ: ಮಾಧ್ಯಮಗಳು ಸೇರಿದಂತೆ ಎಲ್ಲರೂ ಜವಾಬ್ದಾರಿ ಅರಿತು ನಡೆಯಬೇಕು. ಪ್ರಸ್ತುತ ಕೊರೋನಾ ಆತಂಕ ಸೃಷ್ಟಿಸುವ ಮಟ್ಟದಲ್ಲಿ ಇಲ್ಲ. ಮಾಧ್ಯಮಗಳು ವೈಭವೀಕರಿಸಿ ಜನರಲ್ಲಿ ಆತಂಕ ಸೃಷ್ಟಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಎಲ್ಲರಿಗೂ ಮಾಸ್ಕ್ ಬೇಕಿಲ್ಲ: 60 ವರ್ಷ ಮೇಲ್ಪಟ್ಟವರು, ದೀರ್ಘಕಾಲೀನ ಅನಾರೋಗ್ಯ ಹೊಂದಿರುವವರು ಹಾಗೂ ಸೋಂಕು ಉಳ್ಳವರು ಮಾಸ್ಕ್ ಧರಿಸುವುದು ಕಡ್ಡಾಯ. ಉಳಿದಂತೆ ಹೆಚ್ಚು ಜನಸಂಪರ್ಕ ಉಳ್ಳವರು, ಜನಸಂದಣಿಗೆ ಹೋಗುವವರು ಮಾಸ್ಕ್ ಧರಿಸಬೇಕು ಎಂದು ಶಿಫಾರಸು ಮಾಡಿದ್ದೇವೆ. ಶಾಲಾ-ಕಾಲೇಜುಗಳು ಕೆಲ ಕಡೆ ಮಕ್ಕಳಿಗೆ ಮಾಸ್ಕ್ ಧರಿಸುವಂತೆ ಸೂಚಿಸಿವೆ. ಇದು ಒಳ್ಳೆಯದು. ಆದರೆ ಸರ್ಕಾರದಿಂದ ಸದ್ಯಕ್ಕೆ ಎಲ್ಲರಿಗೂ ಮಾಸ್ಕ್‌ ಕಡ್ಡಾಯ ಎಂದು ಹೇಳಿಲ್ಲ. ಅಂತಹ ಅಗತ್ಯ ಇನ್ನೂ ಬಂದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಕ್ರಿಸ್‌ಮಸ್, ಹೊಸ ವರ್ಷಕ್ಕೆ ಪ್ರತ್ಯೇಕ ನಿರ್ಬಂಧಗಳಿಲ್ಲ: ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಎರಡೂ ಹಬ್ಬಗಳ ಆಚರಣೆ ವೇಳೆ ಜನದಟ್ಟಣೆ ಇದ್ದರೆ ಅಂತಹ ಕಡೆ ಹೋಗುವವರು ಮಾಸ್ಕ್ ಧರಿಸಿ ಹೋಗಬೇಕು. ಅದನ್ನು ಬಿಟ್ಟು ಉಳಿದ ಯಾವುದೇ ಪ್ರತ್ಯೇಕ ಮಾರ್ಗಸೂಚಿ ರೂಪಿಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಭೆಯ ಇತರೆ ತೀರ್ಮಾನಗಳು

  • ಆಕ್ಸಿಜನ್‌ ಕೊರತೆಯಿಂದ ಕಳೆದ ಬಾರಿ ಸಾವು ಹೆಚ್ಚಾಗಿತ್ತು . ಇದು ಮರುಕಳಿಸದಂತೆ ಆಕ್ಸಿಜನ್‌ ಲಭ್ಯತೆ ಖಾತರಿಪಡಿಸಿಕೊಳ್ಳಬೇಕು. ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಸನ್ನದ್ಧವಾಗಬೇಕು.
  • ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು.
  • ಕೊರೋನಾ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಬೇಕು.
  • ಮಾಕ್‌ ಡ್ರಿಲ್‌ನಲ್ಲಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಿಕೊಂಡು ಎಲ್ಲಾ ಆಸ್ಪತ್ರೆಗಳು ಸಜ್ಜಾಗಬೇಕು.
  • ಕೊರೋನಾಗಾಗಿಯೇ ಪ್ರತ್ಯೇಕ (ಡೆಡಿಕೇಟೆಡ್‌) ಆಸ್ಪತ್ರೆಯನ್ನು ಸಜ್ಜುಗೊಳಿಸಬೇಕು.

error: Content is protected !! Not allowed copy content from janadhvani.com